ಲಂಡನ್: 2018 ಭಾರತದ ಪಾಲಿಗೆ ಹರ್ಷದ ವರ್ಷವಾಗಲಿದೆಯೇ?ಹೌದು ಎನ್ನುತ್ತಿದೆ ಲಂಡನ್‌ನ ಸೆಂಟರ್ ಫಾರ್ ಎಕನಾಮಿಕ್ಸ್ ಆ್ಯಂಡ್ ಬ್ಯುಸಿನೆಸ್ ರಿಸರ್ಚ್(ಸಿಇಬಿಆರ್) ಕನ್ಸಲ್ಟೆನ್ಸಿಯ ವರದಿ. ಮುಂದಿನ ವರ್ಷ ಯುಕೆ ಹಾಗೂ ಫ್ರಾನ್ಸ್ ದೇಶಗಳನ್ನು ಹಿಂದಿಕ್ಕುವ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಈ ವರದಿ ಭವಿಷ್ಯ ನುಡಿದಿದೆ.
ಮುಂದಿನ 15 ವರ್ಷಗಳಲ್ಲಿ ಏಷ್ಯನ್ ಆರ್ಥಿಕತೆಗಳು ಪ್ರಾಬಲ್ಯ ಹೊಂದಿ ಟಾಪ್ 10 ಅತಿದೊಡ್ಡ ಆರ್ಥಿಕತೆಗಳಾಗಿ ರೂಪುಗೊಳ್ಳಲಿವೆ. ಇದರ ಭಾಗವಾಗಿ ಭಾರತವೂ ಗಣನೀಯ ಪ್ರಗತಿ ದಾಖಲಿಸಲಿದೆ. ಆರ್ಥಿಕತೆ ವಿಚಾರದಲ್ಲಿ ಫ್ರಾನ್ಸ್ ಹಾಗೂ ಬ್ರಿಟನ್ ಅನ್ನು ಹಿಂದಿಕ್ಕಿ, 5ನೇ ಸ್ಥಾನಕ್ಕೇರಲಿದೆ ಎಂದು ವರದಿ ಹೇಳಿದೆ.
ನೋಟುಗಳ ಅಮಾನ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಿಂದಾಗಿ ಭಾರತದ ಆರ್ಥಿಕತೆಯು ಸದ್ಯಕ್ಕೆ ತಾತ್ಕಾಲಿಕ ಹಿನ್ನಡೆ ಅನುಭವಿಸಿದೆ. ಆದರೆ, ಮುಂದೆ ಈ ಸಮಸ್ಯೆಗಳೆಲ್ಲ ದೂರವಾಗಿ ಭಾರತವು ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಲಿದೆ ಎಂದು ಸಂಸ್ಥೆಯ ಉಪ ಮುಖ್ಯಸ್ಥ ಡಗ್ಲಾಸ್ ಮ್ಯಾಕ್‌ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ.
ಚೀನಾ ನಂ.1: ಚೀನಾ ಕೂಡ ಗಣನೀಯ ಅಭಿವೃದ್ಧಿ ಕಾಣುತ್ತಿದ್ದು, 2032ರ ವೇಳೆಗೆ ಅಮೆರಿಕವನ್ನೇ ಹಿಂದಿಕ್ಕಿ, ಚೀನಾ ವಿಶ್ವದ ನಂ.1 ಆರ್ಥಿಕತೆಯಾಗಿ ಮಿಂಚಲಿದೆ ಎಂದೂ ವರದಿ ಹೇಳಿದೆ. ಹಿಂದಿನ ವರದಿಯಲ್ಲಿ, ಅಮೆರಿಕವು 2031ರಲ್ಲೇ 2ನೇ ಸ್ಥಾನಕ್ಕಿಳಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅಲ್ಲಿನ ವ್ಯಾಪಾರ-ವಹಿವಾಟಿನ ಮೇಲೆ ನಾವು ನಿರೀಕ್ಷಿಸಿದ್ದ ಮಟ್ಟಿಗೆ ಕೆಟ್ಟ ಪರಿಣಾಮ ಬೀರಿಲ್ಲ. ಹೀಗಾಗಿ, ಅಮೆರಿಕವು ಮತ್ತೂ ಒಂದು ವರ್ಷ ಜಾಗತಿಕ ಕಿರೀಟ ಹೊತ್ತುಕೊಂಡಿರಲಿದೆ ಎಂದಿದ್ದಾರೆ ವಿಲಿಯಮ್ಸ್. ಈಗ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ರಷ್ಯಾ 2032ರಲ್ಲಿ 17ನೇ ಸ್ಥಾನಕ್ಕಿಳಿಯಲಿದೆ ಎಂದೂ ವರದಿ ಹೇಳಿದೆ.