Advertisement

ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು ವಾಪಾಸು ಕಳಿಸಲು ಕೇಂದ್ರ ಸಮ್ಮತಿ

09:12 AM Apr 16, 2020 | Hari Prasad |

ನವದೆಹಲಿ: ಕೋವಿಡ್ 19 ಸಂಬಂಧಿತ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಯಮ ಜಾರಿಗೊಂಡ ಬಳಿಕ ಭಾರತದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಒಟ್ಟು 180 ಪಾಕಿಸ್ತಾನ ಪ್ರಜೆಗಳನ್ನು ಆ ದೇಶಕ್ಕೆ ವಾಪಾಸು ಕಳುಹಿಸಲು ಕೇಂದ್ರ ಸರಕಾರ ಸಮ್ಮತಿಸಿದೆ. ಇದರ ಪ್ರಕಾರ ಏಪ್ರಿಲ್ 16ರ ಗುರುವಾರದಂದು 41 ಜನ ಪಾಕ್ ಪ್ರಜೆಗಳು ವಾಘಾ-ಅಟ್ಟಾರಿ ಗಡಿ ಮೂಲಕ ರಸ್ತೆ ಮಾರ್ಗವಾಗಿ ಪಾಕಿಸ್ತಾನಕ್ಕೆ ಮರಳಲಿದ್ದಾರೆ.

Advertisement

ವಿವಿಧ ಕಾರಣಗಳಿಂದ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳಲ್ಲಿ ಸುಮಾರು 180 ಜನ ವಾಪಾಸು ತಮ್ಮ ದೇಶಕ್ಕೆ ಮರಳಲು ಬಯಸಿದ್ದಾರೆ ಎಂದು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಛೇರಿ ಭಾರತೀಯ ಅದಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಈಗಾಗಲೇ ದೇಶದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರಜೆಗಳನ್ನು ಅವರವರ ದೇಶಗಳಿಗೆ ವಾಪಾಸು ಕಳುಹಿಸಲು ಭಾರತೀಯ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕಾರ್ಯತತ್ಪರರಾಗಿದ್ದಾರೆ. ಇವರಲ್ಲಿ ಪಾಕಿಸ್ತಾನಿಗಳೂ ಸೇರಿದ್ದಾರೆ.

ಕೋವಿಡ್ 19 ವಿಷಯಗಳಿಗೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆಗೆ ಸಂಪರ್ಕ ವ್ಯಕ್ತಿಯಾಗಿರುವ ಹೆಚ್ಚುವರಿ ಕಾರ್ಯದರ್ಶಿ ಡಮ್ಮು ರವಿ ಅವರು ವಿವಿಧ ರಾಜ್ಯಗಳ ಅಧಿಕಾರಿಗಳಿ ಬರೆದಿರುವ ಪತ್ರದಲ್ಲಿ 41 ಪಾಕಿಸ್ತಾನಿ ಪ್ರಜೆಗಳನ್ನು ಗುರುವಾರದಂದು ಅವರ ದೇಶಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಡಬೇಕೆಂದು ತಿಳಿಸಿದ್ದಾರೆ. ದೆಹಲಿ, ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪಾಕ್ ಪ್ರಜೆಗಳು ಕೋವಿಡ್ ಲಾಕ್ ಡೌನ್ ಕಾರಣದಿಂದ ಸಿಕ್ಕಿಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next