Advertisement

ರಫೇಲ್‌ ಜತೆ ಹ್ಯಾಮರ್‌ ; ಯುದ್ಧ ವಿಮಾನ ಜತೆಗೆ ಫ್ರಾನ್ಸ್‌ನಿಂದ ಕ್ಷಿಪಣಿ

04:07 AM Jul 24, 2020 | Hari Prasad |

ಹೊಸದಿಲ್ಲಿ/ಬೀಜಿಂಗ್‌: ರಫೇಲ್‌ ಆಗಮನದ ಸುದ್ದಿ ಕೇಳಿ ಚಿಂತಾಕ್ರಾಂತವಾಗಿರುವ ಚೀನಕ್ಕೆ ಈಗ ಡಬಲ್‌ ಶಾಕ್‌!

Advertisement

ಫ್ರಾನ್ಸ್‌ನಿಂದ ಜು. 29ರಂದು ಭಾರತಕ್ಕೆ ಹಾರಿಬರಲಿರುವ 5 ರಫೇಲ್‌ ವಿಮಾನಗಳು ನಿಖರ ದಾಳಿಗೆ ಹೆಸರಾದ ಹ್ಯಾಮರ್‌ ಕ್ಷಿಪಣಿಗಳನ್ನೂ ಹೊತ್ತು ತರಲಿವೆ!

ಹ್ಯಾಮರ್‌ ಕ್ಷಿಪಣಿ ಅಳವಡಿಕೆಯಿಂದಾಗಿ ರಫೇಲ್‌ ಸಾಮರ್ಥ್ಯ ದುಪ್ಪಟ್ಟಾಗಿದೆ.

ಸುಮಾರು 60-70 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗುರಿಗಳನ್ನು ಹುಟ್ಟಡಗಿಸಬಲ್ಲ ಹ್ಯಾಮರ್‌, ಜಗತ್ತಿನಲ್ಲಿ ನಡುಕ ಹುಟ್ಟಿಸುವ ಪ್ರಬಲ ಕ್ಷಿಪಣಿಗಳಲ್ಲಿ ಒಂದು.

‘ತುರ್ತು ಶಸ್ತ್ರಾಸ್ತ್ರ ಖರೀದಿ ಅಧಿಕಾರದಡಿ ಸೇನೆ ಹ್ಯಾಮರ್‌ ಕ್ಷಿಪಣಿಗಳನ್ನು ಖರೀದಿಸುತ್ತಿದೆ. ರಫೇಲ್‌ ವಿಮಾನಗಳೊಂದಿಗೆ ಹ್ಯಾಮರ್‌ಗಳನ್ನು ಪೂರೈಸಲು ಫ್ರೆಂಚ್‌ ಅಧಿಕಾರಿಗಳು ಒಪ್ಪಿದ್ದಾರೆ’ ಎಂದು ಸರಕಾರದ ಮೂಲಗಳು ತಿಳಿಸಿವೆ.

Advertisement

ಲಡಾಖ್‌ಗೆ ಬಲ
ಹ್ಯಾಮರ್‌ ಕ್ಷಿಪಣಿಗಳು ಶತ್ರುಪಾಳಯದ ಬಂಕರ್‌ ಅಥವಾ ಕಣಿವೆ ಪ್ರದೇಶದಂಥ ಅಡಗುತಾಣಗಳನ್ನು ಒಂದೇ ಏಟಿಗೆ ನಾಶಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಆಗಸದಿಂದ ಭೂಪ್ರದೇಶಕ್ಕೆ ಗುರಿಯಾಗಿಸಿಕೊಂಡು ನಿಖರ ದಾಳಿಮಾಡಬಲ್ಲ ಹ್ಯಾಮರ್‌, ಫ್ರಾನ್ಸ್‌ನ ವಾಯು ಮತ್ತು ನೌಕಾದಳ ಪಾಲಿಗೆ ‘ಬ್ರಹ್ಮಾಸ್ತ್ರ’ವೇ ಆಗಿದೆ.

ಚೀನ ನಿಗೂಢ ನಡೆ
ಫಿಂಗರ್‌ 5 ಮತ್ತು ಪ್ಯಾಂಗಾಂಗ್‌ ಸರೋವರ ವಲಯದಲ್ಲಿ ಕಳೆದೊಂದು ವಾರದಿಂದ ಚೀನ ಸೈನಿಕರ ಚಲನೆ ಗಮನಕ್ಕೆ ಬಂದಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ. ಆದರೆ, ರಿಡ್ಜ್ ಲೈನ್‌ನಲ್ಲಿ ಇನ್ನೂ ಪಿಎಲ್‌ಎ ಠಿಕಾಣಿ ಹೂಡಿದೆ. ಪೂರ್ವ ಲಡಾಖ್‌ ಗಡಿಗೆ ಸಮೀಪದ ಮುಂಚೂಣಿಯ ನೆಲೆಗಳಲ್ಲಿ ಸುಮಾರು 40 ಸಾವಿರ ಸೈನಿಕರನ್ನು ನಿಯೋಜಿಸಿ ಪಿಎಲ್‌ಎ ರಹಸ್ಯ ರಣತಂತ್ರ ಹಣೆಯುತ್ತಿದೆ ಎಂದು ‘ಎಎನ್‌ಐ’ ತಿಳಿಸಿದೆ.

ಭಾರತ ಜತೆಗಾರ
ಭಾರತವನ್ನು ಶಾಶ್ವತವಾಗಿ ರಕ್ಷಣಾ ಕಾರ್ಯತಂತ್ರದ ಪಾಲುದಾರರನ್ನಾಗಿ ಮಾಡಲು ಅಮೆರಿಕ ಎನ್‌ಡಿಎಎ ಕಾಯ್ದೆಗೆ ತಿದ್ದುಪಡಿ ತಂದಿದೆ. ಚೀನಕ್ಕೆ ತಕ್ಕಪಾಠ ಕಲಿಸಲು ಅಮೆರಿಕವು ಭಾರತ, ಜಪಾನ್‌, ದಕ್ಷಿಣ ಕೊರಿಯಾದ ಜತೆಗೂಡಿ ಕೆಲಸ ಮಾಡಲಿದೆ ಎಂದು ಅಮೆರಿಕ ಸಂಸದ ಮಾರ್ಕ್‌ ವಾರ್ನರ್‌ ಹೇಳಿದ್ದಾರೆ.
ಭೂತಾನ್‌ಗೆ ಭಾರತ ಬಲ
ಚೀನದ ಬೆದರಿಕೆಗೆ ಗುರಿಯಾಗಿರುವ ಭೂತಾನ್‌ಗೆ ಆರ್ಥಿಕ ಬಲ ನೀಡಲು ಭಾರತ ಮುಂದಾಗಿದೆ. ರಫ್ತು ವ್ಯವಹಾರಕ್ಕೆ ಅನುಕೂಲವಾಗುವಂತೆ ಭೂತಾನ್‌ನ ಶಾಶ್ವತ ಭೂ ಕಸ್ಟಮ್ಸ್‌ ಸ್ಟೇಷನ್‌ (ಎಲ್‌ಸಿಎಸ್‌) ಕೋರಿಕೆಯನ್ನು ಭಾರತ ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಣ ರಂಗದಲ್ಲೂ ಚೀನಕ್ಕೆ ಟಕ್ಕರ್‌
ಭಾರತೀಯ ಗುಪ್ತಚರ ಸಂಸ್ಥೆಗಳು ಚೀನದ ವಿದ್ಯುತ್‌, ಟೆಲಿಕಾಂ ಸಂಸ್ಥೆಗಳ ಮೇಲಷ್ಟೇ ಅನುಮಾನ ವ್ಯಕ್ತಪಡಿ ಸುತ್ತಿಲ್ಲ. ಶೈಕ್ಷಣಿಕ ರಂಗದಲ್ಲೂ ಚೀನವನ್ನು ತಡೆಯುವಂತೆ ಸರಕಾರಕ್ಕೆ ಸಲಹೆ ನೀಡಿದೆ. ಚೀನ ಸರಕಾರದಿಂದ ಧನಸಹಾಯ ಪಡೆದ ಕನ್‌ಫ್ಯೂಷಿಯಸ್‌ ಶೈಕ್ಷಣಿಕ ಸಂಸ್ಥೆಗಳು ಹ್ಯಾನ್‌ ಚೀನೀ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಮಾಡಲು ಭಾರತದ ಸ್ಥಳೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿವೆ ಎಂದು ಎಚ್ಚರಿಸಿದೆ. ಈ ಸಂಸ್ಥೆಗಳನ್ನು ಪಟ್ಟಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸಲಹೆ ನೀಡಿದೆ.

ಮಂಗಳಕ್ಕೆ ಉಪಗ್ರಹ ಹಾರಿಬಿಟ್ಟ ಚೀನ
ಕೋವಿಡ್ 19ನಿಂದ ಜಗತ್ತನ್ನು ನರಳುವಂತೆ ಮಾಡಿರುವ ಚೀನ ಪ್ರಪ್ರಥಮ ಬಾರಿಗೆ ಮಂಗಳನತ್ತ ಹೆಜ್ಜೆ ಇಟ್ಟಿದೆ. “ಟಿಯನ್‌ವೆನ್‌- 1′ (ಸ್ವರ್ಗದ ಸತ್ಯಾನ್ವೇಷಣೆ) ಎಂಬ ಹೆಸರಿನ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಹಾರಿಬಿಟ್ಟಿದೆ. ಹೈನಾನ್‌ ಪ್ರಾಂತ್ಯದ ದಕ್ಷಿಣ ದ್ವೀಪದ ವೆನ್ಟಾಂಗ್‌ ಬಾಹ್ಯಾಕಾಶ ಕೇಂದ್ರದಿಂದ ಲಾಂಗ್‌ಮಾರ್ಚ್‌ ರಾಕೆಟ್‌ ಮೂಲಕ ಹಾರಿಬಿಟ್ಟಿರುವ ಉಪಗ್ರಹ ಮಂಗಳನ ಕಕ್ಷೆಯನ್ನು 2021ರ ಫೆಬ್ರವರಿಯಲ್ಲಿ ಸೇರಲಿದೆ. ಮಂಗಳನ ಮಣ್ಣು, ಭೌಗೋಳಿಕ ರಚನೆ, ವಾತಾವರಣ ಮತ್ತು ನೀರಿನ ಬಗ್ಗೆ ‘ಟಿಯನ್‌ವೆನ್‌- 1’ ಮಾಹಿತಿ ರವಾನಿಸಲಿದೆ. ಭಾರತ, ಅಮೆರಿಕ, ರಷ್ಯಾದ ಬಳಿಕ ಚೀನ ಈ ಸಾಧನೆ ಮಾಡಿದೆ.

ನಮಗೆ ಚೀನದೊಂದಿಗೆ ಯಾವುದೇ  ಗಡಿ ಇಲ್ಲ. ಆದರೆ, ಲಡಾಖ್‌ನ ಬಿಕ್ಕಟ್ಟನ್ನು ನಾವು ಒಪ್ಪುವುದಿಲ್ಲ. ಉಯ್ಗರ್‌ ಮುಸ್ಲಿಮರು, ಹಾಂಕಾಂಗ್‌ ಮೇಲಿನ ಚೀನ ದಬ್ಟಾಳಿಕೆಯನ್ನೂ ಸಹಿಸುವುದಿಲ್ಲ.
– ಸರ್‌ ಫಿಲಿಪ್‌ ಬಾರ್ಟನ್‌, ಭಾರತದಲ್ಲಿ ಬ್ರಿಟಿಷ್‌ ಹೈ ಕಮಿಷನರ್‌

Advertisement

Udayavani is now on Telegram. Click here to join our channel and stay updated with the latest news.

Next