ಹೊಸದಿಲ್ಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಭಾರತವನ್ನು ಜಗತ್ತಿನ ಉತ್ಪಾದನ ಕೇಂದ್ರವಾಗಿ ರೂಪಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಖರ್ಗೆ, ಮುಂದಿನ 5 ವರ್ಷಗಳಲ್ಲಿ ಜಿಡಿಪಿಯಲ್ಲಿ ಉತ್ಪಾದನ ವಲಯದ ಪಾಲನ್ನು ಶೇ.14ರಿಂದ ಶೇ.20ಕ್ಕೆ ಏರಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಾಂಗ್ರೆಸ್‌ನ ಇತ್ತೀಚಿನ 25 ವರ್ಷ ಆಡಳಿತದಲ್ಲಿ ಜಿಡಿಪಿಯಲ್ಲಿ ಉತ್ಪಾದನ ವಲಯದ ಪಾಲು ಹೆಚ್ಚಿತ್ತು. ಆದರೆ, ಕಳೆದ 10 ವರ್ಷದಲ್ಲಿ ಬಿಜೆಪಿಯ ಆಡಳಿತದಲ್ಲಿ ಉತ್ಪಾದನ ವಲಯ ಶೇ.14ಕ್ಕೆ ನಿಂತು ಹೋಗಿದೆ ಎಂದಿದ್ದಾರೆ. ಬ್ಯುಸಿನೆಸ್‌ಗೆ ಬೇಕಾಗುವ ಆರೋಗ್ಯಯುತ, ನಿರ್ಭಯ, ವಿಶ್ವಾಸಾರ್ಹ ವಾತಾವರಣ ಸೃಷ್ಟಿಸುವ ವಾಗ್ಧಾನ ಮಾಡಿರುವ ಖರ್ಗೆ, ಈಗ ಚಾಲ್ತಿಯಲ್ಲಿರುವ ಎಲ್ಲ ನಿಯಮಗಳನ್ನು ಪುನರ್‌ಪರಿಶೀಲಿಸಿ, ಉದ್ಯಮಕ್ಕೆ ಸ್ವಾತಂತ್ರ್ಯ ಕಲ್ಪಿಸುವುದಕ್ಕಾಗಿ ತಿದ್ದುಪಡಿ ಇಲ್ಲವೇ, ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು. ವಿವಿಧ ರೀತಿಯ ಉದ್ಯಮಗಳಲ್ಲಿ ಭಾರತವನ್ನು ನಾಯಕನ್ನಾಗಿ ರೂಪಿಸಲಾಗುವುದು ಎಂದು ಖರ್ಗೆ ಅವರು ತಿಳಿಸಿದ್ದಾರೆ.
ಆಯೋಗದ “ಒತ್ತಡ’ ನಾನು ಬಲ್ಲೆ: ಮತ್ತೆ ಪತ್ರ
ಚುನಾವಣ ದತ್ತಾಂಶ ವಿಳಂಬದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ, ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಚುನಾವಣ ಆಯೋಗವು ಪ್ರತಿಕ್ರಿಯಿಸಿತ್ತು. ಇದಕ್ಕೆ ಪ್ರತಿಯಾಗಿ ಮತ್ತೆ ಪತ್ರ ಬರೆದಿರುವ ಖರ್ಗೆ, ಆಯೋಗ ಯಾವ ರೀತಿ “ಒತ್ತಡ’ದಲ್ಲಿ ಕೆಲಸ ಮಾಡುತ್ತಿದೆ ಎಂದು ಬಲ್ಲೆ ಎಂದು ಹೇಳಿದ್ದಾರೆ. ನೇರವಾಗಿ ದೂರುಗಳನ್ನು ನೀಡಿದರೂ ಕ್ಯಾರೆ ಎನ್ನದ ಆಯೋಗವು ತಮ್ಮ ಬಹಿರಂಗ ಪತ್ರಕ್ಕೆ ಪ್ರತಿಕ್ರಿಯಿಸಿರುವುದು ಆಶ್ಚರ್ಯ ತಂದಿದೆ. ಆದರೆ ತಾವು ಎತ್ತಿದ ಯಾವುದೇ ದೂರುಗಳಿಗೆ ಅದು ಉತ್ತರಿಸಿಲ್ಲ ಎಂದು ಆರೋಪಿಸಿದ್ದಾರೆ.