ನವದೆಹಲಿ:ಲಡಾಖ್ ನ ಗಾಲ್ವಾನ್ ಪ್ರದೇಶದಲ್ಲಿ ಸಂಘರ್ಷಕ್ಕೆ ಇಳಿದಿದ್ದ ಚೀನ ಭಾರತದ ಸೈನಿಕರು ಹುತಾತ್ಮರಾದ ಘಟನೆ ನಂತರ ಭಾರತ ಪರೋಕ್ಷವಾಗಿ ಹೊಡೆತ ನೀಡತೊಡಗಿದೆ. ಈಗಾಗಲೇ 59 ಚೀನ ಆ್ಯಪ್ ಗಳನ್ನು ನಿಷೇಧಿಸಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಚೀನ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಗಾತ್ರದ ವಿವಿಧ ಉದ್ಯಮಗಳಲ್ಲಿ ಚೀನಾ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ, ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಂತರ ಉಭಯ ರಾಷ್ಟ್ರಗಳ ನಡುವೆ ಭಾರೀ ಉದ್ವಿಗ್ನ ತಲೆದೋರಿತ್ತು. ಲಡಾಖ್ ಗಡಿಯಲ್ಲಿ ಚೀನ, ಭಾರತ ಸೇನೆಯನ್ನು ನಿಯೋಜಿಸಿದೆ. ಮತ್ತೊಂದೆಡೆ ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆ ನಡೆಯುತ್ತಿದ್ದು, ಈವರೆಗೂ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ
ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಜಂಟಿ ಸಹಯೋಗದೊಂದಿಗೂ ಕಾರ್ಯನಿರ್ವಹಿಸಲು ನಾವು ಚೀನ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ, ಎಂಎಸ್ಎಂಇ ಯೋಜನೆಯಲ್ಲಿ ಚೀನ ಕಂಪನಿಗಳಿಗೆ ನಿಷೇಧ ಹೇರುವ ಹಾಗೂ ಭಾರತೀಯ ಕಂಪನಿಗಳ ಅರ್ಹತಾ ಮಾನದಂಡ ವಿಸ್ತರಿಸುವ, ನಿಯಮಗಳನ್ನು ಸರಳಗೊಳಿಸುವ ನೆಲೆಯಲ್ಲಿ ಹೊಸ ನೀತಿ ರೂಪಿಸಲಾಗುವುದು ಎಂದು ಹೇಳಿದರು.