Advertisement

ಮೋನಾ, ಮಿಥಾಲಿ ಮಿಂಚು ವಿಶ್ವಕಪ್‌ ಪ್ರಧಾನ ಸುತ್ತಿಗೆ ನೆಗೆದ ಭಾರತ

03:45 AM Feb 18, 2017 | |

ಕೊಲಂಬೊ: ವನಿತಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ತನ್ನ ಅಜೇಯ ಓಟವನ್ನು ಮುಂದುವರಿಸಿ ಪ್ರಧಾನ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರದ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಮಣಿಸಿ ಈ ಅವಕಾಶ ಸಂಪಾದಿಸಿತು. ಮುಖ್ಯ ಸುತ್ತು ತಲುಪಿದ ಮತ್ತೂಂದು ತಂಡ ದಕ್ಷಿಣ ಆಫ್ರಿಕಾ.

Advertisement

ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾದೇಶಕ್ಕೆ ನಿಗದಿತ 50 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 155 ರನ್‌ ಮಾತ್ರ. ಜವಾಬಿತ್ತ ಭಾರತ 33.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 158 ರನ್‌ ಬಾರಿಸಿ ಸಂಭ್ರಮಿಸಿತು.

ಲೀಗ್‌ ಹಂತದ ಎಲ್ಲ 4 ಪಂದ್ಯಗಳನ್ನು ಗೆದ್ದ ಭಾರತವೀಗ ಸೂಪರ್‌ ಸಿಕ್ಸ್‌ನಲ್ಲೂ ಗೆಲುವಿನ ತೋರಣ ಕಟ್ಟುತ್ತಿದೆ. ಬುಧವಾರ ಅಜೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತಕ್ಕೆ 49 ರನ್ನುಗಳ ಗೆಲುವು ಒಲಿದಿತ್ತು. ಮಿಥಾಲಿ ರಾಜ್‌ ಬಳಗವಿನ್ನು ಫೆ. 19ರ ಕೊನೆಯ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.

ಭಾರತದ ಜಯದಲ್ಲಿ “ಎಂ ಫ್ಯಾಕ್ಟರ್‌’ ಪ್ರಮುಖ ಪಾತ್ರ ವಹಿಸಿತು. ಮಧ್ಯಮ ವೇಗಿ ಮಾನ್ಸಿ ಜೋಶಿ, ಆರಂಭಿಕ ಆಟಗಾರ್ತಿ ಮೋನಾ ಮೆಶ್ರಮ್‌, ನಾಯಕಿ ಮಿಥಾಲಿ ರಾಜ್‌ ಅಮೋಘ ಪ್ರದರ್ಶನವಿತ್ತರು.

ಮಧ್ಯಮ ವೇಗಿ ಮಾನ್ಸಿ ಬಾಂಗ್ಲಾಕ್ಕೆ ಆರಂಭಿಕ ಆಘಾತವಿಕ್ಕಿದವರು. 14 ರನ್‌ ಆಗುವಷ್ಟರಲ್ಲಿ 2 ವಿಕೆಟ್‌ ಹಾರಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಮಾನ್ಸಿ ಸಾಧನೆ 25ಕ್ಕೆ 3. ದ್ವಿತೀಯ ವಿಕೆಟಿಗೆ ಜತೆಗೂಡಿದ ಶರ್ಮಿನ್‌ ಅಖ್ತರ್‌ (35) ಮತ್ತು ಫ‌ರ್ಗಾನಾ ಹಕ್‌ (50) ಸೇರಿಕೊಂಡು 62 ರನ್‌ ಜತೆಯಾಟ ನಿಭಾಯಿಸಿದರೂ ಇದರಲ್ಲಿ ಬಿರುಸಿರಲಿಲ್ಲ. 40 ಓವರ್‌ ಮುಗಿದರೂ ಬಾಂಗ್ಲಾದ 100 ರನ್‌ ಪೂರ್ತಿಗೊಳ್ಳಲಿಲ್ಲ. ಭಾರತದ ಬೌಲರ್‌ಗಳು ಇನ್ನಿಂಗ್ಸ್‌ ಉದ್ದಕ್ಕೂ ಬಿಗಿಯಾದ ದಾಳಿ ಸಂಘಟಿಸುತ್ತ ಹೋದರು.

Advertisement

ಮೋನಾ-ಮಿಥಾಲಿ ಶತಕದ ಜತೆಯಾಟ
ಚೇಸಿಂಗ್‌ ವೇಳೆ ಭಾರತ ದೀಪ್ತಿ ಶರ್ಮ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಮೋನಾ ಮೆಶ್ರಮ್‌-ಮಿಥಾಲಿ ರಾಜ್‌ ಮುರಿಯದ 2ನೇ ವಿಕೆಟಿಗೆ ಸರಿಯಾಗಿ 25 ಓವರ್‌ಗಳಲ್ಲಿ 136 ರನ್‌ ಜತೆಯಾಟದ ಮೂಲಕ ತಂಡಕ್ಕೆ ಸುಲಭ ಗೆಲುವು ತಂದಿತ್ತರು.

ಮೋನಾ 92 ಎಸೆತ ಎದುರಿಸಿ ಅಜೇಯ 78 ರನ್‌ ಬಾರಿಸಿದರು. ಇದರಲ್ಲಿ 12 ಬೌಂಡರಿ ಒಳಗೊಂಡಿತ್ತು. ಇದು ಮೋನಾ ಅವರ 2ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್‌.

ಮಿಥಾಲಿ ರಾಜ್‌ ಕೊಡುಗೆ ಅಜೇಯ 73 ರನ್‌. ಇದು 171ನೇ ಏಕದಿನ ಪಂದ್ಯದಲ್ಲಿ ಮಿಥಾಲಿ ಬಾರಿಸಿದ 43ನೇ ಅರ್ಧ ಶತಕ. 87 ಎಸೆತಗಳ ಈ ಆಟದ ವೇಳೆ 10 ಬೌಂಡರಿ, ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತು. ಸಿಕ್ಸರ್‌ ಮೂಲಕ ಅವರು ಭಾರತದ ಗೆಲುವನ್ನು ಸಾರಿದರು. ಇದು ಈ ಪಂದ್ಯದ ಏಕೈಕ ಸಿಕ್ಸರ್‌ ಆಗಿತ್ತೆಂಬುದು ವಿಶೇಷ.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-50 ಓವರ್‌ಗಳಲ್ಲಿ 8 ವಿಕೆಟಿಗೆ 155 (ಫ‌ರ್ಗಾನಾ 50, ಶರ್ಮಿನ್‌ 35, ಮಾನ್ಸಿ ಜೋಶಿ 25ಕ್ಕೆ 3, ದೇವಿಕಾ ವೈದ್ಯ 17ಕ್ಕೆ 2). ಭಾರತ-33.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 158 (ಮೋನಾ ಔಟಾಗದೆ 78, ಮಿಥಾಲಿ ಔಟಾಗದೆ 73).

Advertisement

Udayavani is now on Telegram. Click here to join our channel and stay updated with the latest news.

Next