ಆ್ಯಂಟಿಗಾ: ಕೂಟದಲ್ಲಿ ಅಜೇಯ ಸಾದನೆ ಮುಂದುವರಿಸಿದ ಭಾರತ ಅಂಡರ್ 19 ತಂಡದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದೆ. ಈ ಮೂಲಕ ಭಾರತ ತಂಡ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಜಯಿಸಿದೆ.
ಇಂಗ್ಲೆಂಡ್ ತಂಡ 44.5 ಓವರ್ ಗಳಲ್ಲಿ 189 ರನ್ ಗಳಿಸಿದರೆ, ಭಾರತ ಈ ಗುರಿಯನ್ನು 47.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಮತ್ತೊಂದು ಕಪ್ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಶೋಚನೀಯ ಆರಂಭ ಪಡೆಯಿತು. ಭಾರತದ ಬೌಲರ್ ಗಳ ದಾಳಿಗೆ ಕುಸಿದ ಆಂಗ್ಲರು, ಕೇವಲ 47 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದರು. ನಂತರ ತಂಡವನ್ನು ಆಧರಿಸಿದ ಜೇಮ್ಸ್ 95 ರನ್ ಗಳಿಸಿದರು. ಜೇಮ್ಸ್ ಸೇಲ್ಸ್ ಅಜೇಯ 34 ರನ್ ಗಳಿಸಿದರು. ಇವರಿಬ್ಬರ ನೆರವಿನಿಂದ ಇಂಗ್ಲೆಂಡ್ ತಂಡ 150 ರ ಗಡಿ ತಲುಪಿತು.
ಇದನ್ನೂ ಓದಿ:ಸಾವಿರ ಪಂದ್ಯದ ಗುಂಗಿನಲ್ಲಿ ಭಾರತ; ವಿಂಡೀಸ್ ವಿರುದ್ಧ ಮೊದಲ ಏಕದಿನ
ಭಾರತದ ಪರ ಮಾರಕ ದಾಳಿ ಸಂಘಟಿಸಿದ ರಾಜ್ ಬಾವ ಐದು ವಿಕೆಟ್ ಕಿತ್ತರೆ, ರವಿ ಕುಮಾರ್ ನಾಲ್ಕು ವಿಕೆಟ್ ಕಿತ್ತರು. ಒಂದು ವಿಕೆಟ್ ಕೌಶಲ್ ತಾಂಬೆ ಪಾಲಾಯಿತು.
ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ರಘುವಂಶಿ ವಿಕೆಟ್ ಕಳೆದುಕೊಂಡಿತು. ನಂತರ ಶೇಕ್ ರಶೀದ್, ನಿಶಾಂತ್ ಸಿಂಧು ಅರ್ಧಶತಕದ ನೆರವಿನಿಂದ ಗುರಿ ಬೆನ್ನತ್ತಿತು. ಇಬ್ಬರೂ ತಲಾ 50 ರನ್ ಗಳಿಸಿದರು. ಆಲ್ ರೌಂಡ್ ಪ್ರದರ್ಶನ ನೀಡಿದ ರಾಜ್ ಬಾವಾ 35 ರನ್ ಗಳಿಸಿದರು. ಕೊನೆಯಲ್ಲಿ ದಿನೇಶ್ ಬಾನಾ ಭರ್ಜರಿ ಸಿಕ್ಸರ್ ಮೂಲಕ ತಂಡಕ್ಕೆ ಜಯ ತಂದಿತ್ತರು.