Advertisement

ಕರನ್‌ ಓಡದೇ ಬಿಟ್ಟ ರನ್‌ ಭಾರತದ ಜಯಕ್ಕೆ ಕಾರಣವೇ?

11:10 PM Mar 29, 2021 | Team Udayavani |

ಪುಣೆ: ಕೊನೆಗೂ ವಿಶ್ವ ಚಾಂಪಿಯನ್‌ ಇಂಗ್ಲೆಂಡಿಗೆ ಭಾರತದ ನೆಲದಲ್ಲಿ ಏಕದಿನ ಸರಣಿ ವಶ ಪಡಿಸಿಕೊಳ್ಳುವ ಯೋಗ ಕೂಡಿಬರಲಿಲ್ಲ. ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರ ದಿಟ್ಟ ಬ್ಯಾಟಿಂಗ್‌ ಸಾಹಸದ ಹೊರತಾಗಿಯೂ ಅದು ಕೇವಲ 7 ರನ್ನಿನಿಂದ ದೂರವೇ ಉಳಿಯಿತು.

Advertisement

ರವಿವಾರದ ನಿರ್ಣಾಯಕ ಏಕ ದಿನದಲ್ಲಿ ಯುವ ಕ್ರಿಕೆಟಿಗ ಸ್ಯಾಮ್‌ ಕರನ್‌ ಬ್ಯಾಟ್‌ ಬೀಸುತ್ತಿದ್ದ ರೀತಿ, ಸಹ ಆಟಗಾರರ ಬೆಂಬಲದಿಂದ ಅವರು ಇನ್ನಿಂಗ್ಸ್‌ ಬೆಳೆಸುತ್ತಿದ್ದುದನ್ನು ಕಂಡಾಗ ಇಂಗ್ಲೆಂಡ್‌ ಏಕೆ ವಿಶ್ವ ಚಾಂಪಿಯನ್‌ ಎನಿಸಿಕೊಂಡಿದೆ ಎಂಬುದು ನಿಚ್ಚಳವಾ ಗುತ್ತ ಹೋಗಿತ್ತು. ಕೊನೆಯಲ್ಲಿ ಎದ್ದು ಬಿದ್ದು, ಬೆನ್ನು ಬೆನ್ನಿಗೆ ಕ್ಯಾಚ್‌ಗಳನ್ನೆಲ್ಲ ಕೈಚೆಲ್ಲಿ ಭಾರತ ಜಯ ಸಾಧಿಸಿತಾದರೂ ಕ್ರಿಕೆಟ್‌ ಅಭಿಮಾನಿಗಳ ಹೃದಯ ಮಾತ್ರ ಕರನ್‌ ಮತ್ತು ಇಂಗ್ಲೆಂಡಿಗೆ ಮಿಡಿಯುತ್ತಿದ್ದುದು ಸುಳ್ಳಲ್ಲ.

ಕಾಡತೊಡಗಿದ ಕರನ್‌
8ನೇ ಕ್ರಮಾಂಕದಲ್ಲಿ ಸ್ಯಾಮ್‌ ಕರನ್‌ ಬ್ಯಾಟ್‌ ಹಿಡಿದು ಬರುವ ತನಕ ಭಾರತ ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕರನ್‌ ರನ್ನಿನ ಇಟ್ಟಿಗೆಯನ್ನು ಪೇರಿಸುತ್ತ ಹೋಗಿ ಪಂದ್ಯಕ್ಕೊಂದು ತಿರುವು ಕೊಟ್ಟ ರೀತಿ ನಿಜಕ್ಕೂ ಅಮೋಘ, ಅದ್ಭುತ. 200 ರನ್ನಿನ ಬಳಿಕ ಅವರು ಆದಿಲ್‌ ರಶೀದ್‌ ಮತ್ತು ಮಾರ್ಕ್‌ ವುಡ್‌ ಬೆಂಬಲ ಪಡೆದು ನಡೆಸಿದ ಜತೆಯಾಟ ಏಕದಿನ ಕ್ರಿಕೆಟಿನ ಪಾಠದಂತಿತ್ತು.

ಜತೆಗಾರನ ವಿಕೆಟ್‌ ಮುಖ್ಯ
ಸಹಜವಾಗಿಯೇ ಇಂಥ ಸಂದರ್ಭ ದಲ್ಲಿ ಬೇರೂರಿದ ಆಟಗಾರನೊಬ್ಬ ತನ್ನ ಬ್ಯಾಟಿಂಗ್‌ ಲಯವನ್ನು ಕಾಯ್ದು ಕೊಳ್ಳುವ ಜತೆಗೆ ಸಹ ಆಟಗಾರನ ವಿಕೆಟ್‌ ರಕ್ಷಿಸುವತ್ತಲೂ ಇನ್ನಿಲ್ಲದ ನಿಗಾ ವಹಿಸಬೇಕಾಗುತ್ತದೆ. ಎದುರಾಳಿ ಬೌಲರ್ ತಂತ್ರಗಾರಿಕೆ ಕೂಡ ಇದೇ ಆಗಿರುತ್ತದೆ. ಬೇರೂರಿದ ಆಟಗಾರನನ್ನು ಬಿಟ್ಟು ಆತನ ಜತೆಗಾರನನ್ನು ಟಾರ್ಗೆಟ್‌ ಮಾಡಿಕೊಂಡಿರುತ್ತಾರೆ.

ಸ್ಯಾಮ್‌ ಕರನ್‌ ಸ್ಟ್ರೈಕ್‌ ಉಳಿಸಿ ಕೊಳ್ಳುವ ಯೋಜನೆಯಲ್ಲೇನೋ ಯಶಸ್ಸು ಕಂಡರು. ಆದರೆ ಕೊನೆಯಲ್ಲಿ ಅವರು ದೊಡ್ಡ ಹೊಡೆತಗಳಿಗಷ್ಟೇ ಮಹತ್ವ ಕೊಟ್ಟರೇ ಹೊರತು, ಸಿಂಗಲ್ಸ್‌ ಗಳನ್ನು ತೆಗೆದುಕೊಳ್ಳಲು ಹೋಗಲೇ ಇಲ್ಲ. ಹೀಗಾಗಿ ಕನಿಷ್ಠ 8-10 ಸಿಂಗಲ್‌ ರನ್‌ ವ್ಯರ್ಥವಾಗಿತ್ತು. ಕೊನೆಯಲ್ಲಿ ಇಂಗ್ಲೆಂಡ್‌ ಸೋಲಿನ ಅಂತರ ಕೂಡ ಇಷ್ಟೇ ಅಂತರದಲ್ಲಿತ್ತು. ಕರನ್‌ ಆ ಸಿಂಗಲ್ಸ್‌ ತೆಗೆದುಕೊಂಡು, ಜತೆಗಾರನಿಗೆ ಆಡಲು ಅವಕಾಶ ನೀಡಿದ್ದೇ ಆದರೆ ಭಾರತಕ್ಕೆ ಗೆಲುವು ಸಾಧ್ಯವಾಗುತ್ತಿತ್ತೇ? ಪ್ರಶ್ನೆ ಮೂಡುವುದು ಸಹಜ.

Advertisement

ಆದರೆ ಇಲ್ಲಿ ಏನೂ ಸಂಭವಿಸ ಬಹುದಿತ್ತು. ಜತೆಗಾರ ಬೇಗನೇ ಔಟಾಗಿ ಇಂಗ್ಲೆಂಡ್‌ ಬೇಗನೇ ಸೋಲ ಬಹುದಿತ್ತು ಅಥವಾ ಆ ಆಟಗಾರನೇ ಮುನ್ನುಗ್ಗಿ ಬೀಸಿ ತಂಡದ ಗೆಲುವನ್ನು ಸಾರಲೂಬಹುದಿತ್ತು. ಹೀಗಾಗಿ ಕರನ್‌ ನಿರ್ಧಾರವನ್ನು ಇಲ್ಲಿ ಪ್ರಶ್ನಿಸುವುದು ಖಂಡಿತ ತಪ್ಪಾಗುತ್ತದೆ.

ಆದರೆ ಕೊನೆಯ ವಿಕೆಟ್‌ ಕೈಯ ಲ್ಲಿರುವಾಗ ಕರನ್‌ ಸ್ಟ್ರೈಕ್‌ ಉಳಿಸಿಕೊಳ್ಳ ತೊಡಗಿರೆ ಹೆಚ್ಚು ಲಾಭವಾಗುತ್ತಿತ್ತು ಎಂಬುದು ನಿಜ. ಆಗ ಅವರ ಸೆಂಚುರಿ ಕೂಡ ಪೂರ್ತಿಗೊಳ್ಳುತ್ತಿತ್ತು.

ನಿಜ, ನಾನೇ ಹೆಚ್ಚಿನ ಸಂಖ್ಯೆಯ ಎಸೆತಗಳನ್ನು ಎದುರಿಸಿದೆ. ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಗುರಿಯಾಗಿತ್ತು. ಆದರೆ ನಾವು ಗೆಲ್ಲಲಿಲ್ಲ. ಆದರೆ ನಾನು ಆಡಿದ ರೀತಿ ಖುಷಿ ಕೊಟ್ಟಿದೆ. ಕೊನೆಯಲ್ಲಿ ಭುವನೇಶ್ವರ್‌, ನಟರಾಜನ್‌ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸುತ್ತಿದ್ದರು. ಹೀಗಾಗಿ ನಾನು ಸ್ಟ್ರೈಕ್‌ ಉಳಿಸಿಕೊಳ್ಳಲು ಮುಂದಾದೆ. ನನ್ನ ಪಾಲಿಗೆ ಈ ಪಂದ್ಯವೊಂದು ಪಾಠ.
– ಸ್ಯಾಮ್‌ ಕರನ್

Advertisement

Udayavani is now on Telegram. Click here to join our channel and stay updated with the latest news.

Next