ಮತ್ತೆ ಎಸ್. ವೆಂಕಟರಾಘವನ್ ನೇತೃತ್ವದಲ್ಲಿ ವಿಶ್ವಕಪ್ ಆಡಲಿಳಿದ ಭಾರತವಿಲ್ಲಿ ಲೆಕ್ಕದ ಭರ್ತಿಯ ತಂಡವಾಗಿತ್ತು. ಆಡಿದ ಮೂರೂ ಲೀಗ್ ಪಂದ್ಯಗಳಲ್ಲಿ ಸೋತು ಬಹಳ ಬೇಗ ಕೂಟದಿಂದ ನಿರ್ಗಮಿಸಿತು.
ಕಾಕತಾಳೀಯವೆಂಬಂತೆ ಭಾರತಕ್ಕೆ ಮತ್ತೆ ಉದ್ಘಾಟನಾ ಪಂದ್ಯದ ಯೋಗ ಕೂಡಿಬಂದಿತ್ತು. ಎದುರಾಳಿ ಹಾಲಿ ಚಾಂಪಿಯನ್ ಖ್ಯಾತಿಯ ಬಲಿಷ್ಠ ವೆಸ್ಟ್ ಇಂಡೀಸ್.
1979ರ ಜೂನ್ 9ರಂದು ಏಕಕಾಲದಲ್ಲಿ 4 ಲೀಗ್ ಪಂದ್ಯಗಳು ಆರಂಭಗೊಂಡರೂ ಭಾರತ-ವೆಸ್ಟ್ ಇಂಡೀಸ್ ನಡುವಿನ ಬರ್ಮಿಂಗ್‌ಹ್ಯಾಮ್ ಪಂದ್ಯಕ್ಕೆ ಮೊದಲ ಪಂದ್ಯವೆಂಬ ಹೆಗ್ಗಳಿಕೆ ಲಭಿಸಿತ್ತು. ಇದನ್ನು ವಿಂಡೀಸ್ 9 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಮಾಡಿತು.
ಭಾರತದ ದ್ವಿತೀಯ ಎದುರಾಳಿ ನ್ಯೂಜಿಲ್ಯಾಂಡ್. ಪಂದ್ಯದ ತಾಣ ಲೀಡ್ಸ್‌ನ ಹೇಡಿಂಗ್ಲೆ ಅಂಗಳ. ನ್ಯೂಜಿಲ್ಯಾಂಡ್ ಇದನ್ನು 8 ವಿಕೆಟ್‌ಗಳಿಂದ ಗೆದ್ದಿತು.
ಐಸಿಸಿ ಟ್ರೋಫಿ ಗೆದ್ದು ವಿಶ್ವಕಪ್ ಅರ್ಹತೆ ಸಂಪಾದಿಸಿದ ಶ್ರೀಲಂಕಾ ಕೈಯಲ್ಲೂ ಸೋಲಿನೇಟು ತಿಂದದ್ದು ಭಾರತಕ್ಕೆ ಎದುರಾದ ದೊಡ್ಡ ಅವಮಾನ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ 47 ರನ್ನುಗಳ ಜಯ ಸಾಧಿಸಿತು.
ಭಾರತ ತಂಡ
ಎಸ್. ವೆಂಕಟರಾಘವನ್ (ನಾಯಕ), ಸುನೀಲ್ ಗಾವಸ್ಕರ್, ಅಂಶುಮನ್ ಗಾಯಕ್ವಾಡ್, ಮೊಹಿಂದರ್ ಅಮರನಾಥ್, ದಿಲೀಪ್ ವೆಂಗ್‌ಸರ್ಕಾರ್, ಜಿ.ಆರ್. ವಿಶ್ವನಾಥ್, ಬೃಜೇಶ್ ಪಟೇಲ್, ಸುರೀಂದರ್ ಖನ್ನಾ, ಕಪಿಲ್‌ದೇವ್, ಕರ್ಸನ್ ಘಾವ್ರಿ, ಬಿಷನ್ ಸಿಂಗ್ ಬೇಡಿ.