Advertisement

ಕೋವಿಡ್: ಹಾಟ್‌ ಸ್ಪಾಟ್‌ ದೇಶಗಳ ಪೈಕಿ ಬ್ರೆಜಿಲ್‌ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಭಾರತ

10:15 AM Sep 07, 2020 | Nagendra Trasi |

ನವದೆಹಲಿ: ದೇಶದಲ್ಲಿ ಕೊರೊನಾ ವ್ಯಾಪಿಸುವಿಕೆ ತೀವ್ರಗೊಂಡಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ದಾಖಲೆಯ 90,632 ಕೋವಿಡ್ ಪ್ರಕರಣಗಳು
ಪತ್ತೆಯಾಗಿವೆ. ಈ ಮೂಲಕ ಭಾರತವು ಬ್ರೆಜಿಲ್‌ ಅನ್ನೂ ಹಿಂದಿಕ್ಕಿ, ಜಗತ್ತಿನ ಹಾಟ್‌ ಸ್ಪಾಟ್‌ ದೇಶಗಳ ಪೈಕಿ ಎರಡನೇ ಸ್ಥಾನಕ್ಕೇರಿದೆ.

Advertisement

ಬ್ರೆಜಿಲ್‌ನಲ್ಲಿ ಭಾನುವಾರ ಕೋವಿಡ್ ದೃಢಪಟ್ಟವರ ಸಂಖ್ಯೆ 41.23 ಲಕ್ಷ ದಾಟಿದರೆ, ಭಾರತದ ಸೋಂಕಿತರ ಒಟ್ಟಾರೆ ಸಂಖ್ಯೆ 41.60 ಲಕ್ಷ ಮೀರಿದೆ. ಅಲ್ಲದೆ, 24 ಗಂಟೆಗಳಲ್ಲಿ 90 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾದ ಮೊದಲ ದೇಶ ಎಂಬ ಕುಖ್ಯಾತಿಗೂ ಭಾರತ ಪಾತ್ರವಾಗಿದೆ. 64.35 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಕರಣಗಳಿರುವ ದೇಶವಾಗಿದೆ.

ಶನಿವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ 1,065 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಇದೇ ವೇಳೆ, ಈವರೆಗೆ 32 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.77.32ಕ್ಕೇರಿಕೆಯಾಗಿದೆ. ಅಲ್ಲದೆ, ಒಂದೇ ದಿನದಲ್ಲಿ ದಾಖಲೆಯ 70 ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ನಡುವೆ, ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಹಾಗೂ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ದೀಪೇಂದರ್‌ ಸಿಂಗ್‌ ಹೂಡಾಗೆ ಕೊರೊನಾ ದೃಢಪಟ್ಟಿದೆ.

ಸೆ. 5ರವರೆಗೆ 15 ಲಕ್ಷದಷ್ಟುಭಾರತೀಯರು ಸ್ವದೇಶಕ್ಕೆ
ಕೋವಿಡ್ ಲಾಕ್‌ಡೌನ್‌ ಬಳಿಕ ವಿದೇಶಗಳಲ್ಲಿದ್ದ ಸುಮಾರು 15 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಆ ಪೈಕಿ 4.5 ಲಕ್ಷಕ್ಕೂ ಅಧಿಕ ಮಂದಿ ‘ವಂದೇ ಭಾರತ್‌’ ಯೋಜನೆಯಡಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನಗಳ ಮೂಲಕ ಆಗಮಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

Advertisement

ಲಾಕ್‌ ಡೌನ್‌ನಿಂದಾಗಿ ವಿದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲೆಂದು ಮೇ 6ರಿಂದ ವಂದೇ ಭಾರತ್‌ನಡಿ ವಿಮಾನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹಳಷ್ಟು ಜನರು ಇದರ ಲಾಭ ಪಡೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ. ಸೆ. 5ರಂದು 4,059 ಭಾರತೀಯರು ಸ್ವದೇಶಕ್ಕೆ ಬಂದಿಳಿದಿದ್ದಾರೆ ಎಂದೂ ಪುರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next