ನವದೆಹಲಿ: ದಕ್ಷಿಣ ಕೊರಿಯಾದ ಹುಂಡೈ ಸಂಸ್ಥೆಯ ಕಾಶ್ಮೀರದ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾಡಲಾದ ಟ್ವೀಟ್ ವಿಚಾರದಲ್ಲಿ ಭಾರತದ ವಿದೇಶಾಂಗ ಸಚಿವಾಲಯ ದಕ್ಷಿಣ ಕೊರಿಯಾದ ರಾಯಭಾರಿಗೆ ಪ್ರತಿಕ್ರಿಯೆ ನೀಡುವಂತೆ ಸೋಮವಾರ ಸಮನ್ಸ್ ನೀಡಿದೆ.
ಇನ್ನೊಂದತ್ತ ಸಿಯೋಲ್‌ನಲ್ಲಿರುವ ಭಾರತೀಯ ರಾಯಭಾರಿಯು ಹುಂಡೈ ಮುಖ್ಯ ಕಚೇರಿಯಿಂದ ಪ್ರತಿಕ್ರಿಯೆ ಕೇಳಿದ್ದಾರೆ.
“ಹುಂಡೈ ಪಾಕಿಸ್ತಾನ ಮಾಡಿರುವ ಟ್ವೀಟ್ ಅನ್ನು ಒಪ್ಪಲು ಸಾಧ್ಯವಿಲ್ಲ. ಅದು ಭಾರತದ ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ್ದಾಗಿದ್ದು, ಅದರ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ರಾಯಭಾರಿಗೆ ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ.
ಹಾಗೆಯೇ ಈ ವಿಚಾರವಾಗಿ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಚುಂಗ್ ಇಯಿ ಯಾಂಗ್ ಅವರು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕರೆ ಮಾಡಿದ್ದು, ಚರ್ಚೆ ನಡೆಸಿದ್ದಾರೆ. ಆ ಪೋಸ್ಟ್‌ನಿಂದ ಭಾರತಕ್ಕೆ ಮತ್ತು ಇಲ್ಲಿನ ಜನತೆಗೆ ಉಂಟಾದ ನೋವಿಗಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ರಾಜ್ಯಸಭೆಯಲ್ಲೂ ಚರ್ಚೆ:
ಹುಂಡೈ ವಿವಾದ ಮಂಗಳವಾರ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಅದರ ಬಗ್ಗೆ ಮಾತನಾಡಿದ ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, “ಹುಂಡೈ ಸ್ಪಷ್ಟನೆ ನೀಡಿದೆ. ಆದರೆ ಇನ್ನೂ ಆಳವಾಗಿ ಕ್ಷಮೆ ಯಾಚಿಸುವಂತೆ ನಾವು ಸಂಸ್ಥೆಗೆ ಹೇಳಿದ್ದೇವೆ’ ಎಂದು ಹೇಳಿದ್ದಾರೆ.
ದೂರು ದಾಖಲು: ವಿವಾದಾತ್ಮಕ ಟ್ವೀಟ್ ಮಾಡಿದ ಹುಂಡೈ, ಕಿಯಾ ಮೋಟಾ ರ್ಸ್, ಕೆಎಫ್ಸಿ ಮತ್ತು ಪಿಜ್ಜಾ ಹಟ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೆಹಲಿಯಲ್ಲಿ ವಕೀಲರೊಬ್ಬರು ದೂರು ನೀಡಿದ್ದಾರೆ. ಈ ಕಂಪನಿಗಳ ನೋಂದಣಿ ತೆಗೆದುಹಾಕಿ, ಎಫ್ಐಆರ್ ದಾಖಲಿಸಿಕೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ.