ಕೊಲೊಂಬೊ: “ಏಶ್ಯನ್ ಎಮರ್ಜಿಂಗ್ ಕಪ್’ ಟೂರ್ನಿ ಫೈನಲ್‌ನಲ್ಲಿ ಭಾರತದ ಎಮರ್ಜಿಂಗ್ ತಂಡ ಕೇವಲ 3 ರನ್‌ಗಳಿಂದ ಶ್ರೀಲಂಕಾ ಎಮರ್ಜಿಂಗ್ ತಂಡದ ವಿರುದ್ಧ ಸೋತು ಪ್ರಶಸ್ತಿಯನ್ನು ಕಳೆದುಕೊಂಡಿದೆ.
ಶನಿವಾರ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 270 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಭಾರತ 50 ಓವರ್‌ಗಳಲ್ಲಿ 9 ವಿಕೆಟಿಗೆ 267 ರನ್ ಗಳಿಸಲಷ್ಟೇ ಶಕ್ತವಾಯಿತು.
ಶ್ರೀಲಂಕಾ ಮೊದಲ ಓವರ್‌ನಲ್ಲೇ ಒಂದು ವಿಕೆಟ್ ಕಳೆದುಕೊಂಡಿತು. ಆದರೆ ಉಳಿದ ಆಟಗಾರರು ಅತ್ಯುತ್ತಮ ಆಟವಾಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಹಸಿತ ಬೊಯಗೊಡ (54), ಕಮಿಂಡು ಮೆಂಡಿಸ್ (61) ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದರು. ಭಾರತ 100 ರನ್ ಗಳಿಸುವ ಮೊದಲೇ 5 ವಿಕೆಟ್ ಕಳೆದುಕೊಂಡು ಅಘಾತ ಅನುಭವಿಸಿತು. ನಾಯಕ ಜಯಂತ್ ಯಾದವ್ (71) ಹಾಗೂ ಶಮ್ಸ್ ಮುಲಾನಿ (46) ಅವರ ಅತ್ಯುತ್ತಮ ಆಟದಿಂದ ಗೆಲುವಿನ ದಡ ಸಮೀಪಿಸಿತು. ಆದರೆ ಭಾರತ ಕೊನೆಯಲ್ಲಿ ಸತತ 2 ವಿಕೆಟ್ ಕಳೆದುಕೊಂಡು ಗೆಲುವಿನ ಅವಕಾಶವನ್ನೂ ಕಳೆದುಕೊಂಡಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿ ಅಜೇಯವಾಗಿ ಉಳಿದಿದ್ದ ಭಾರತ ತಂಡ ಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ- 50 ಓವರ್‌ಗಳಲ್ಲಿ 7 ವಿಕೆಟಿಗೆ 270 (ಬೊಯಗೊಡ 54, ಮೆಂಡಿಸ್ 61, ಅಂಕಿತ್ ರಜಪೂತ್ 61 ಕ್ಕೆ2). ಭಾರತ- 50 ಓವರ್‌ಗಳಲ್ಲಿ 9 ವಿಕೆಟಿಗೆ 267 (ಜಯಂತ್ ಯಾದವ್ 71, ಶಮ್ಸ್ ಮುಲಾನಿ 46, ಗುಣರತ್ನೆ 38ಕ್ಕೆ 3).