ಹೊಸದಿಲ್ಲಿ/ಬೀಜಿಂಗ್: ಕೊರೊನಾ ವೈರಸ್‌ನಿಂದ ತತ್ತರಿಸಿರುವ ಚೀನದಲ್ಲೀಗ ಸ್ಮಶಾನ ಮೌನ ಆವರಿಸಿದೆ. ವೈರಸ್‌ಗೆ ಬಲಿಯಾಗುತ್ತಿರುವವ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದ್ದು, ಶುಕ್ರವಾರ ಇದು 636ಕ್ಕೇರಿದೆ. ಚೀನದಾದ್ಯಂತದ 31 ಸಾವಿರ ಮಂದಿಗೆ ಸೋಂಕು ತಗುಲಿದೆ. ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಭಾರತ ಸರಕಾರ, ಮಂಗಳೂರು ಸಹಿತ ದೇಶದ ಪ್ರಮುಖ 12 ಬಂದರುಗಳಲ್ಲಿ ಸ್ಕ್ರೀನಿಂಗ್, ನಿಗಾ ವ್ಯವಸ್ಥೆ ರೂಪಿಸುವಂತೆ ಆದೇಶ ಹೊರಡಿಸಿದೆ.
ಅದರಂತೆ, ಸಮುದ್ರದ ಮೂಲಕ ಬರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ತಪಾಸಣೆ ನಡೆಸಿಯೇ ದೇಶದೊಳಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಎನ್-95 ಮಾಸ್ಕ್ಗಳು, ಥರ್ಮಲ್ ಸ್ಕ್ಯಾನರ್‌ಗಳನ್ನು ಖರೀದಿಸುವಂತೆ ಬಂದರುಗಳಿಗೆ ಸರಕಾರ ಸೂಚಿಸಿದೆ. ಇನ್ನೊಂದೆಡೆ, ಈವರೆಗೆ ದೇಶದಲ್ಲಿ 150 ಪ್ರಯಾಣಿಕರಲ್ಲಿ ರೋಗಲಕ್ಷಣ ಕಂಡುಬಂದ ಕಾರಣ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯಸಭೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ದೇಶದ 21 ಏರ್‌ಪೋರ್ಟ್‌ಗಳಲ್ಲೂ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಸಿಂಗಾಪುರ ಮತ್ತು ಹಾಂಕಾಂಗ್‌ನಿಂದ ಬರುವ ಎಲ್ಲ ಪ್ರಯಾಣಿಕರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಮುಚ್ಚಿದ ಕಾರು ಘಟಕ: ಚೀನದಲ್ಲಿದ್ದ ಜಗತ್ತಿನ ಅತಿದೊಡ್ಡ ಕಾರು ಉತ್ಪಾದಕ ಘಟಕಕ್ಕೂ ಕೊರೊನಾವೈರಸ್‌ನ ಬಿಸಿ ತಟ್ಟಿದೆ. ಉಲ್ಸಾನ್ ಕಾಂಪ್ಲೆಕ್ಸ್‌ನಲ್ಲಿದ್ದ ದಕ್ಷಿಣ ಕೊರಿಯಾದ ಹುಂಡೈ ಕಾರು ಉತ್ಪಾದಕ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ದ.ಕೊರಿಯಾ ಶುಕ್ರವಾರ ಘೋಷಿಸಿದೆ.
ಇಲ್ಲಿ ವರ್ಷಕ್ಕೆ 14 ಲಕ್ಷ ಕಾರುಗಳು ತಯಾರಾಗುತ್ತಿದ್ದವು. ಇನ್ನು, ವುಹಾನ್‌ನಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿ ಆಹಾರತದ ತೀವ್ರ ಕೊರತೆ ಉಂಟಾಗಿದ್ದು, ಪ್ರಾಣಿಗಳು ಹಸಿವಿನಿಂದ ನರಳುತ್ತಿವೆ ಎಂದು ವರದಿಗಳು ತಿಳಿಸಿವೆ.
ಇದೇ ವೇಳೆ, ವೈರಸ್ ಕುರಿತು ಮೊದಲು ಮಾಹಿತಿ ನೀಡಿದ್ದ ಚೀನದ ವೈದ್ಯ ಲಿ ವೆನ್‌ಲಿಯಾಂಗ್ ನಿಧನವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ನೌಕೆಯಲ್ಲಿ 61 ಮಂದಿಗೆ ಸೋಂಕು
ಚೀನದಿಂದ ಮರಳಿದ್ದ ಜಪಾನ್‌ನ ಕ್ರೂಸ್ ನೌಕೆಯಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 61ಕ್ಕೇರಿಕೆಯಾಗಿದೆ. ಈ ನೌಕೆಯಲ್ಲಿ 3,700 ಮಂದಿ ಪ್ರಯಾಣಿಕರಿದ್ದರು. ಈ ನಡುವೆ, ಜಗತ್ತಿನಾದ್ಯಂತ ವೈರಸ್ ಹಬ್ಬದಂತೆ ಧರಿಸುವ ಮಾಸ್ಕ್ಗಳ ತೀವ್ರ ಅಭಾವ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.