Advertisement

ಭಾರತದ ಮೀಸಲು ಸಾಮರ್ಥ್ಯಕ್ಕೊಂದು ವೇದಿಕೆ : ದ್ರಾವಿಡ್‌ ಮಾರ್ಗದರ್ಶನ, ಧವನ್‌ ಸಾರಥ್ಯ

10:12 PM Jul 17, 2021 | Team Udayavani |

ಕೊಲಂಬೊ: ಏಕಕಾಲದಲ್ಲಿ ಎರಡು ದೇಶಗಳಲ್ಲಿ ಕ್ರಿಕೆಟ್‌ ಸರಣಿ ಏರ್ಪಡಿಸುವ ಬಿಸಿಸಿಐ ಯೋಜನೆ ರವಿವಾರ ಕೊಲಂಬೊದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ಸಾಕಾರಗೊಳ್ಳಲಿದೆ. ಇಲ್ಲಿ ಶಿಖರ್‌ ಧವನ್‌ ನಾಯಕತ್ವದ ಟೀಮ್‌ ಇಂಡಿಯಾ-2 ಮೊದಲ ಏಕದಿನ ಪಂದ್ಯವಾಡಲಿದೆ. ಇನ್ನೊಂದೆಡೆ ವಿರಾಟ್‌ ಕೊಹ್ಲಿ ನೇತೃತ್ವದ ಮಾಮೂಲು ಪಡೆ ಇಂಗ್ಲೆಂಡ್‌ ಪ್ರವಾಸದಲ್ಲಿ ನಿರತವಾಗಿದೆ.

Advertisement

ವರ್ಷಾಂತ್ಯದ ಟಿ20 ವಿಶ್ವಕಪ್‌ಗಾಗಿ ಸೂಕ್ತ ಕಾಂಬಿ ನೇಶನ್‌ ಒಂದರ ಹುಡುಕಾಟದಲ್ಲಿರುವ ಭಾರತಕ್ಕೆ ಈ ಲಂಕಾ ಪ್ರವಾಸ ಹೆಚ್ಚು ಅನುಕೂಲವಾಗಲಿದೆ. ಇಲ್ಲಿನ ಬಹಳಷ್ಟು ಮಂದಿ ಯುವ ಆಟಗಾರರು ಐಪಿಎಲ್‌ನಲ್ಲಿ ಯಶಸ್ಸು ಸಾಧಿಸಿದವರೇ ಆಗಿದ್ದಾರೆ.

ಕೆಲವರಂತೂ ಎಂದಿನಿಂದಲೇ ಭಾರತ ತಂಡದ ಬಾಗಿಲು ಬಡಿಯುತ್ತ ಇದ್ದಾರೆ. ಈ ರೀತಿಯ ಎರಡು ತಂಡಗಳ ಪ್ರಯೋಗದಿಂದ ಇವರಿಗೆಲ್ಲ ಭರ್ಜರಿ ಲಾಭ ವಾಗಿರುವುದು ಸುಳ್ಳಲ್ಲ. ಜತೆಗೆ ಭಾರತದ ಮೀಸಲು ಸಾಮರ್ಥ್ಯಕ್ಕೂ ಇದೊಂದು ವೇದಿಕೆ ಆಗಲಿದೆ.

ದ್ರಾವಿಡ್‌-ಧವನ್‌ ಕಾಂಬಿನೇಶನ್‌
ಸಶಕ್ತ ಯುವ ಪಡೆಯೊಂದನ್ನು ಕಟ್ಟಿ ಭಾರತೀಯ ಕ್ರಿಕೆಟ್‌ ಭವಿಷ್ಯವನ್ನು ಗಟ್ಟಿಗೊಳಿಸಿದ “ಗೋಡೆ’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಈ ತಂಡದ ಕೋಚ್‌ ಆಗಿರುವುದು ಆಟಗಾರರ ಅದೃಷ್ಟವೇ ಆಗಿದೆ. ಅಂಡರ್‌-19, ಭಾರತ ಎ ತಂಡವನ್ನು ಬಲಿಷ್ಠ ಗೊಳಿಸಿದ ದ್ರಾವಿಡ್‌ ಪಾಲಿಗೆ ಇದು ಸೀನಿಯರ್‌ ತಂಡದ ಮೊದಲ ಕೋಚಿಂಗ್‌ ಅನುಭವ. ಅವರ ಗರಡಿಯಲ್ಲಿ ಬೆಳೆದವರೇ ಇಲ್ಲಿದ್ದಾರೆ. ಇನ್ನೊಂದೆಡೆ ಧವನ್‌ ಮೊದಲ ಸಲ ನಾಯಕರಾಗಿ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಭಾರತ ಮ್ಯಾಜಿಕ್‌ ಮಾಡುವುದು ಖಂಡಿತ ಎಂಬುದು ಎಲ್ಲರ ಲೆಕ್ಕಾಚಾರ.

6 ಮಂದಿ ಹೊಸಬರು
ದೇವದತ್ತ ಪಡಿಕ್ಕಲ್‌, ಋತುರಾಜ್‌ ಗಾಯಕ್ವಾಡ್‌, ಕೃಷ್ಣಪ್ಪ ಗೌತಮ್‌, ಇಶಾನ್‌ ಕಿಶನ್‌, ವರುಣ್‌ ಚಕ್ರವರ್ತಿ, ಚೇತನ್‌ ಸಕಾರಿಯಾ… ಹೀಗೆ ಹನ್ನೊಂದರ ಬಳಗಕ್ಕೆ ಪದಾರ್ಪಣೆ ಮಾಡುವವರ ದೊಡ್ಡ ಯಾದಿಯೇ ಇಲ್ಲಿದೆ. ಆಯ್ಕೆಯಾದ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ, ಆದರೆ ಈ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡುತ್ತೇನೆ ಎಂದು ದ್ರಾವಿಡ್‌ ಭರವಸೆ ನೀಡಿರುವುದರಿಂದ ಇವರೆಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಧವನ್‌, ಶಾ, ಸೂರ್ಯಕುಮಾರ್‌, ಪಾಂಡೆ, ಹಾರ್ದಿಕ್‌, ಭುವನೇಶ್ವರ್‌, ಚಹಲ್‌, ಕುಲದೀಪ್‌, ಸೈನಿ ಅವರೆಲ್ಲ ಮೊದಲ ಆಯ್ಕೆಯ ಆಟಗಾರರು ಎನ್ನಲಡ್ಡಿಯಿಲ್ಲ. ಉಳಿದಂತೆ ಓಪನಿಂಗ್‌ ವಿಭಾಗದಲ್ಲಿ ಪಡಿಕ್ಕಲ್‌-ಗಾಯಕ್ವಾಡ್‌-ರಾಣಾ, ಕೀಪಿಂಗ್‌ನಲ್ಲಿ ಸ್ಯಾಮ್ಸನ್‌-ಇಶಾನ್‌ ಕಿಶನ್‌ ನಡುವೆ ಪೈಪೋಟಿ ಇದೆ. ಏಕದಿನಕ್ಕೆ ಸ್ಯಾಮ್ಸನ್‌, ಟಿ20ಗೆ ಇಶಾನ್‌ ಕಿಶನ್‌ ಕೀಪಿಂಗ್‌ ನಡೆಸಬಹುದು.

ಮುಂಬರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ತಂಡಕ್ಕೆ ಎಂಥ ಆಟಗಾರರ ಅಗತ್ಯವಿದೆ ಎಂಬುದರ ಕುರಿತು ದ್ರಾವಿಡ್‌-ಧವನ್‌ ಈಗಾಗಲೇ ಕೊಹ್ಲಿ- ರವಿಶಾಸ್ತ್ರಿ ಜತೆ ಚರ್ಚೆ ನಡೆಸಿದ್ದಾಗಿ ವರದಿಯಾಗಿದೆ. ಆ ಪ್ರಕಾರವೇ ಲಂಕೆಯಲ್ಲಿ ಯುವ ಆಟಗಾರರನ್ನು ಆಡಿಸುವ ಯೋಜನೆ ಹಾಕಿಕೊಂಡಿರುವ ಸಾಧ್ಯತೆ ಇದೆ.

ಲಂಕಾ ದುರ್ಬಲ ತಂಡ
ಶ್ರೀಲಂಕಾ ತನ್ನ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ದುರ್ಬಲ ತಂಡವನ್ನು ಹೊಂದಿದೆ. ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ಮಣ್ಣು ಮುಕ್ಕಿ ವಾಪಸಾಗಿರುವ ಲೆಕ್ಕದ ಭರ್ತಿಯ ತಂಡವಿದು. 4 ವರ್ಷಗಳಲ್ಲಿ 10ನೇ ನಾಯಕನನ್ನು ಕಾಣುತ್ತಿದೆ. ಇದ್ದವರಲ್ಲೇ ಉತ್ತಮರು ಎಂಬಂತಿದ್ದ ಕುಸಲ್‌ ಮೆಂಡಿಸ್‌, ನಿರೋಷನ್‌ ಡಿಕ್ವೆಲ್ಲ, ಏಂಜೆಲೊ ಮ್ಯಾಥ್ಯೂಸ್‌, ಕುಸಲ್‌ ಪೆರೆರ ಅವರೆಲ್ಲರ ಸೇವೆ ಇಲ್ಲಿ ಲಭ್ಯವಾಗುತ್ತಿಲ್ಲ.

ಈ ನಡುವೆ “ಭಾರತದ್ದು ದ್ವಿತೀಯ ದರ್ಜೆಯ ತಂಡ, ಇದರಿಂದ ಲಂಕಾ ಕ್ರಿಕೆಟನ್ನು ಅಪಹಾಸ್ಯ ಮಾಡಿದಂತೆ…’ ಎಂದು ಲಂಕೆಯ ಮಾಜಿ ನಾಯಕ ಅರ್ಜುನ ರಣತುಂಗ ಖ್ಯಾತೆ ತೆಗೆದಿದ್ದಾರೆ. ಈ ಕಾರಣಕ್ಕಾದರೂ ಗೆದ್ದು ತೋರಿಸಬೇಕಾದ ಸವಾಲು ಶ್ರೀಲಂಕಾ ಮುಂದಿದೆ!

ಸಂಭಾವ್ಯ ತಂಡಗಳು
ಭಾರತ: ಶಿಖರ್‌ ಧವನ್‌ (ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಮನೀಷ್‌ ಪಾಂಡೆ, ಇಶಾನ್‌ ಕಿಶನ್‌ (ವಿ.ಕೀ.), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ನವದೀಪ್‌ ಸೈನಿ/ದೀಪಕ್‌ ಚಹರ್‌, ಕುಲದೀಪ್‌ ಯಾದವ್‌/ವರುಣ್‌ ಚಕ್ರವರ್ತಿ/ರಾಹುಲ್‌ ಚಹರ್‌, ಯಜುವೇಂದ್ರ ಚಹಲ್‌.

ಶ್ರೀಲಂಕಾ: ಆವಿಷ್ಕ ಫೆರ್ನಾಂಡೊ, ಪಥುಮ್‌ ನಿಸ್ಸಂಕ, ಮಿನೋದ್‌ ಭನುಕ (ವಿ.ಕೀ.), ಧನಂಜಯ ಡಿ ಸಿಲ್ವ, ಭನುಕ ರಾಜಪಕ್ಷ, ದಸುನ್‌ ಶಣಕ (ನಾಯಕ), ವನಿಂದು ಹಸರಂಗ, ಇಸುರು ಉದಾನ, ಲಕ್ಷಣ ಸಂದಕನ್‌, ದುಷ್ಮಂತ ಚಮೀರ, ಕಸುನ್‌ ರಜಿತ.

Advertisement

Udayavani is now on Telegram. Click here to join our channel and stay updated with the latest news.

Next