Advertisement

ವಾಂಡರರ್ ಸ್ಟೇಡಿಯಂ: ಭಾರತದ ಅದೃಷ್ಟದ ತಾಣ

10:50 PM Jan 01, 2022 | Team Udayavani |

ಜೊಹಾನ್ಸ್‌ಬರ್ಗ್‌: “ವಂಡರ್‌ ಆಫ್ ಕ್ರಿಕೆಟ್‌’ ಎನಿಸಿರುವ ಜೊಹಾನ್ಸ್‌ಬರ್ಗ್‌ನ “ವಾಂಡರರ್ ಸ್ಟೇಡಿಯಂ’ ಭಾರತದ ಪಾಲಿನ ಅದೃಷ್ಟದ ತಾಣ. ಈವರೆಗೆ ಇಲ್ಲಿ 5 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಭಾರತ ಎರಡನ್ನು ಗೆದ್ದು, ಉಳಿದ ಮೂರನ್ನು ಡ್ರಾ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್‌ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ.

Advertisement

ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆ ಯೊಂದಿಗೆ ಸೋಮವಾರದಿಂದ ಸರಣಿಯ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಆಡಲಿಳಿಯಲಿದೆ. ಈ ಹಿನ್ನೆಲೆಯಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಭಾರತ ಸಾಧಿಸಿದ ಟೆಸ್ಟ್‌ ಗೆಲುವುಗಳ ಮೆಲುಕು.

ಮೊದಲೆರಡು ಟೆಸ್ಟ್‌ ಡ್ರಾ
ನಿಷೇಧ ಮುಕ್ತಗೊಂಡು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಸರಣಿ ಆಡಿದ್ದೇ ಭಾರತ. 1992ರ ಈ ಸರಣಿಯಲ್ಲಿ 3 ಟೆಸ್ಟ್‌ ಪಂದ್ಯಗಳಿದ್ದವು. ನಾಯಕರಾಗಿದ್ದವರು ಮೊಹಮ್ಮದ್‌ ಅಜರುದ್ದೀನ್‌ ಮತ್ತು ಕೆಪ್ಲರ್‌ ವೆಸಲ್ಸ್‌. ದ್ವಿತೀಯ ಟೆಸ್ಟ್‌ ಪಂದ್ಯ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಇದು ಡ್ರಾದಲ್ಲಿ ಅಂತ್ಯ ಕಂಡಿತ್ತು. ಈ ಪಂದ್ಯದ ಆಕರ್ಷಣೆಯೆಂದರೆ, ಸಚಿನ್‌ ತೆಂಡುಲ್ಕರ್‌ ಅವರ 4ನೇ ಟೆಸ್ಟ್‌ ಶತಕ (111).

1997ರಲ್ಲಿ ಆಡಲಾದ ಪಂದ್ಯವೂ ಡ್ರಾ ಫ‌ಲಿತಾಂಶ ವನ್ನೇ ಕಂಡಿತ್ತು. ಅಂದಿನ ನಾಯಕರು ಸಚಿನ್‌ ತೆಂಡುಲ್ಕರ್‌ ಮತ್ತು ಹ್ಯಾನ್ಸಿ ಕ್ರೋನ್ಯೆ. ಈ ಪಂದ್ಯದಲ್ಲಿ ರಾಹುಲ್‌ ದ್ರಾವಿಡ್‌ 148 ಮತ್ತು 81 ರನ್‌ ಬಾರಿಸಿ ಮಿಂಚಿದ್ದರು. ಡ್ಯಾರಿಲ್‌ ಕಲಿನನ್‌ (122) ಸಾಹಸದಿಂದ ದಕ್ಷಿಣ ಆಫ್ರಿಕಾ ಸೋಲಿನಿಂದ ಪಾರಾಗಿತ್ತು.

ಮೊದಲ ಗೆಲುವಿನ ಸಂಭ್ರಮ
2006-07ರ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನು 123 ರನ್ನುಗಳಿಂದ ಗೆಲ್ಲುವ ಮೂಲಕ ಭಾರತವಿಲ್ಲಿ ಅಮೋಘ ಸಾಧನೆಗೈದಿತು. ಅಂದಿನ ಗೆಲುವಿನ ನಾಯಕ ರಾಹುಲ್‌ ದ್ರಾವಿಡ್‌ ಈಗ ಟೀಮ್‌ ಇಂಡಿಯಾ ಕೋಚ್‌ ಆಗಿದ್ದಾರೆ. ಆತಿಥೇಯ ತಂಡವನ್ನು ಗ್ರೇಮ್‌ ಸ್ಮಿತ್‌ ಮುನ್ನಡೆಸಿದ್ದರು.

Advertisement

ಭಾರತದ 249ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 84ಕ್ಕೆ ಉದುರಿತ್ತು. ಎಸ್‌. ಶ್ರೀಶಾಂತ್‌ 40 ರನ್ನಿತ್ತು 5 ವಿಕೆಟ್‌ ಉಡಾಯಿಸಿದ್ದರು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 236 ರನ್‌ ಗಳಿಸಿತು. ಸ್ಮಿತ್‌ ಪಡೆಗೆ ಲಭಿಸಿದ ಟಾರ್ಗೆಟ್‌ 402 ರನ್‌. ಶ್ರೀಶಾಂತ್‌ ಜತೆಗೆ ಜಹೀರ್‌ ಖಾನ್‌ ಮತ್ತು ಅನಿಲ್‌ ಕುಂಬ್ಳೆ ಕೂಡ ಘಾತಕವಾಗಿ ಎರಗಿ ತಲಾ 3 ವಿಕೆಟ್‌ ಕಿತ್ತರು. ದಕ್ಷಿಣ ಆಫ್ರಿಕಾ 278ಕ್ಕೆ ಆಲೌಟ್‌ ಆಯಿತು.

ಕೊಹ್ಲಿ ಸಾರಥ್ಯದಲ್ಲಿ ಜಯ2013ರ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತ, 2018ರ ಕೊನೆಯ ಪ್ರವಾಸದಲ್ಲೂ ವಾಂಡರರ್ ಕೋಟೆಗೆ ಲಗ್ಗೆ ಹಾಕಿತ್ತು. ಗೆಲುವಿನ ಅಂತರ 63 ರನ್‌. ಗೆಲುವಿನ ನಾಯಕ ವಿರಾಟ್‌ ಕೊಹ್ಲಿ.

ಭಾರತ 187ಕ್ಕೆ ಕುಸಿದರೆ, ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ 194ಕ್ಕೆ ಕೊನೆಗೊಂಡಿತು. ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಪಡೆ 247 ರನ್‌ ಗಳಿಸಲು ಶಕ್ತವಾಯಿತು. 241 ರನ್‌ ಗುರಿ ಪಡೆದ ಡು ಪ್ಲೆಸಿಸ್‌ ಪಡೆ ಶಮಿ ದಾಳಿಗೆ (28ಕ್ಕೆ 5) ಶರಣಾಗಿ 177ಕ್ಕೆ ಸರ್ವಪತನ ಕಂಡಿತು. ಅಂದಿನ ವಿಜೇತ ತಂಡದ 6 ಸದಸ್ಯರು ಈ ಸಲವೂ ಟೀಮ್‌ ಇಂಡಿಯಾದಲ್ಲಿದ್ದಾರೆ.

ಇದನ್ನೂ ಓದಿ:ಓಟಗಾರ್ತಿ ತರಣ್‌ಜೀತ್‌ ಡೋಪ್‌ ಟೆಸ್ಟ್‌ ನಲ್ಲಿ ಫೇಲ್‌

ವಾಂಡರರ್ನಲ್ಲಿ ಅಭ್ಯಾಸ
“ನ್ಯೂ ಇಯರ್‌ ಟೆಸ್ಟ್‌’ ಪಂದ್ಯಕ್ಕೆ ಟೀಮ್‌ ಇಂಡಿಯಾ ಶನಿವಾರ “ವಾಂಡರರ್ ಸ್ಟೇಡಿಯಂ’ನಲ್ಲಿ ಅಭ್ಯಾಸ ಆರಂಭಿಸಿತು. ಸೆಂಚುರಿಯನ್‌ನಲ್ಲಿ ಮೊದಲ ಸಲ ಟೆಸ್ಟ್‌ ಗೆದ್ದ ಸಂಭ್ರಮದ ಬಳಿಕ ಅಲ್ಲಿಯೇ ಹೊಸ ವರ್ಷಾಚರಣೆ ಮುಗಿಸಿದ ಭಾರತ ತಂಡ ಜೊಹಾನ್ಸ್‌ಬರ್ಗ್‌ಗೆ ಆಗಮಿಸಿತ್ತು.

ಭಾರತ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿರುವ ವೀಡಿಯೋ ಒಂದನ್ನು ಬಿಸಿಸಿಐ ಪೋಸ್ಟ್‌ ಮಾಡಿದೆ. ಸೋಮವಾರ ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್‌ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next