Advertisement

24ರಿಂದ ಇಂಡಿಯಾ ಸಾಫ್ಟ್ ಸಮ್ಮೇಳನ

12:06 PM Jan 17, 2018 | |

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ಸಾಫ್ಟ್ವೇರ್‌ ರಫ್ತು ಉತ್ತೇಜಕ ಮಂಡಳಿಯ (ಇಎಸ್‌ಸಿ) 18ನೇ ಆವೃತ್ತಿಯ “ಇಂಡಿಯಾ ಸಾಫ್ಟ್-2018′ ಸಮ್ಮೇಳನ ಜ.24ರಿಂದ ಎರಡು ದಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

Advertisement

ನಗರದ ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ನಳಿನ್‌ ಕೊಯ್ಲಿ, “ದೇಶದ ಸಣ್ಣ ಮತ್ತು ಮಧ್ಯಮ ಸಾಫ್ಟ್ವೇರ್‌ ಕಂಪನಿಗಳ ವಹಿವಾಟು, ರಫ್ತು ಉತ್ತೇಜನಕ್ಕೆ ಇಂಡಿಯಾ ಸಾಫ್ಟ್ ಸಮ್ಮೇಳನ ಆಯೋಜಿಸಲಾಗುತ್ತಿದೆ.

ಸಣ್ಣ ಪುಟ್ಟ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಅವಕಾಶ ಕಲ್ಪಿಸಲು, ಸಾಫ್ಟ್ವೇರ್‌ ರಫ್ತು ಸಂಬಂಧಿ ಅವಕಾಶಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಹೇಳಿದರು. ದೇಶದ ಸಾಫ್ಟ್ವೇರ್‌ ರಫ್ತು ಪ್ರಮಾಣದಲ್ಲಿ ಶೇ.70ರಷ್ಟು ಉತ್ತರ ಅಮೆರಿಕ, ಶೇ.20ರಷ್ಟು ಯುರೋಪ್‌ ರಾಷ್ಟ್ರಗಳು ಪಾಲು ಪಡೆದಿವೆ.

ಉಳಿದ ಶೇ.10ರಷ್ಟು ರಫ್ತು ಸೇವೆಯನ್ನು ಇತರೆ ರಾಷ್ಟ್ರಗಳು ಬಳಸಿಕೊಳ್ಳುತ್ತಿವೆ. ಪ್ರಮುಖ ಸಾಫ್ಟ್ವೇರ್‌ ಕಂಪನಿಗಳು ದೇಶದ ಮಹಾನಗರಗಳಲ್ಲೇ ಕೇಂದ್ರೀಕೃತವಾಗಿದ್ದು, ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲಿನ ಸಣ್ಣ, ಮಧ್ಯಮ ಸಾಫ್ಟ್ವೇರ್‌ ಕಂಪನಿಗಳು ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಈ ಸಮ್ಮೇಳನ ಉಪಯುಕ್ತವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಉತ್ತರ ಅಮೆರಿಕದ ಮೇಲೆ ರಫ್ತು ಅವಲಂಬನೆ ತಪ್ಪಿಸಿ ಇತರೆ ರಾಷ್ಟ್ರಗಳಿಗೂ ಸಾಫ್ಟ್ವೇರ್‌ ರಫ್ತು ವಹಿವಾಟು ವಿಸ್ತರಿಸಲು ಸಮ್ಮೇಳನದ ಮೂಲಕ ವೇದಿಕೆ ಕಲ್ಪಿಸಲಾಗಿದೆ. ದೇಶದ 250ಕ್ಕೂ ಹೆಚ್ಚು ಸಾಫ್ಟ್ವೇರ್‌ ಸೇವೆ ರಫ್ತು ಕಂಪನಿಗಳು, 60ಕ್ಕೂ ಹೆಚ್ಚು ರಾಷ್ಟ್ರಗಳ 400ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

Advertisement

ಬೆಂಗಳೂರಿನಲ್ಲಿ ಮೊದಲ ಸಮ್ಮೇಳನ: ಬೆಂಗಳೂರು ಆರಂಭದಿಂದಲೂ ಸಾಫ್ಟ್ವೇರ್‌ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ ಸಾಫ್ಟ್ವೇರ್‌ ರಫ್ತು ಕಡಿಮೆಯಿರುವ ನಗರಗಳಲ್ಲಿ ಈವರೆಗೆ ಸಮ್ಮೇಳನ ನಡೆಸಲಾಗುತ್ತಿತ್ತು. ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಸಮ್ಮೇಳನ ಏರ್ಪಡಿಸಲಾಗಿದೆ. ಜತೆಗೆ ಪ್ರಥಮ ಬಾರಿಗೆ ಸಣ್ಣ, ಮಧ್ಯಮ ಸಾಫ್ಟ್ವೇರ್‌ ಕಂಪನಿಗಳಿಗೆ ಮಾರುಕಟ್ಟೆ ವಿಸ್ತರಣೆಗೆ ವೇದಿಕೆ ಕಲ್ಪಿಸಲು ಆದ್ಯತೆ ನೀಡಲಾಗಿದೆ.

ಈವರೆಗೆ ಜಗತ್ತಿನ ಇತರೆ ರಾಷ್ಟ್ರಗಳ ಸಾಫ್ಟ್ವೇರ್‌ ಸಂಬಂಧಿ ಸಮಸ್ಯೆಗಳಿಗೆ ದೇಶಿ ಕಂಪನಿಗಳು ಪರಿಹಾರ ಒದಗಿಸುತ್ತಿದ್ದವು. ಇದೀಗ ದೇಶಿ ಸಾಫ್ಟ್ವೇರ್‌ ಸಮಸ್ಯೆಗಳಿಗೆ ದೇಶಿ ಸಂಸ್ಥೆಗಳಿಂದಲೇ ಪರಿಹಾರ ಕಂಡುಕೊಳ್ಳಲು ಒತ್ತು ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಮಾರನಾಡಿ, ದೇಶದಲ್ಲಿ ವಾರ್ಷಿಕ 170 ಬಿಲಿಯನ್‌ ಡಾಲರ್‌ ಸಾಫ್ಟ್ವೇರ್‌ ರಫ್ತು ವಹಿವಾಟಿನಲ್ಲಿ 120ರಿಂದ 130 ಶತಕೋಟಿ ಡಾಲರ್‌ನಷ್ಟು ಮಾಹಿತಿ ತಂತ್ರಜ್ಞಾನ ಸಾಫ್ಟ್ವೇರ್‌ ಸೇವೆ ಕರ್ನಾಟಕದಿಂದಲೇ ರಫ್ತಾಗುತ್ತಿದೆ.

ಉಳಿದಂತೆ ಪ್ರವಾಸೋದ್ಯಮ, ಆರೋಗ್ಯ ಇತರೆ ಕ್ಷೇತ್ರಗಳು ರಫ್ತು ವಹಿವಾಟಿಗೆ ಕೊಡುಗೆ ನೀಡುತ್ತಿವೆ. 130 ಬಿಲಿಯನ್‌ ಡಾಲರ್‌ ರಫ್ತು ವಹಿವಾಟಿನಲ್ಲಿ 50ರಿಂದ 55 ಬಿಲಿಯನ್‌ ಡಾಲರ್‌ ರಫ್ತು ಸೇವೆಯನ್ನು ಕರ್ನಾಟಕ ಒದಗಿಸುತ್ತಿದ್ದು, ಶೇ.38ರಷ್ಟು ಪಾಲು ಹೊಂದಿದೆ.

ರಾಜ್ಯದಲ್ಲಿ ನವೋದ್ಯಮ ಹಾಗೂ ಅನ್ವೇಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಅಮೆರಿಕ, ಇಂಗ್ಲೆಂಡ್‌ಗೆ ಹೆಚ್ಚಿನ ರಫ್ತು ಸೇವೆ ಒದಗಿಸಲಾಗುತ್ತಿದ್ದು, ಇತರೆ ರಾಷ್ಟ್ರಗಳಿಗೂ ವಿಸ್ತರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ್‌ ಛಡ್ಡಾ, ಇಎಸ್‌ಸಿ ಕಾರ್ಯಕಾರಿ ನಿರ್ದೇಶಕ ಡಿ.ಕೆ.ಸರೀನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next