Advertisement

ಚೀನ ಜತೆಗಿನ ಗಡಿ ತಂಟೆ ಪರಿಹರಿಸುವ ಟ್ರಂಪ್‌ ಆಫ‌ರ್‌ಗೆ ಕೇಂದ್ರ ತಣ್ಣೀರು

04:41 AM May 29, 2020 | Team Udayavani |

ಹೊಸದಿಲ್ಲಿ/ನ್ಯೂಯಾರ್ಕ್‌: ಚೀನ ಜತೆಗಿನ ಗಡಿ ತಂಟೆ ಪರಿಹರಿಸುವ ಬಗ್ಗೆ ನೆರವು ನೀಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಆಫ‌ರ್‌ಗೆ ಕೇಂದ್ರ ತಣ್ಣೀರು ಹಾಕಿದೆ.

Advertisement

ಸದ್ಯ ಉಂಟಾಗಿರುವ ಗಡಿ ತಂಟೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಗುರುವಾರ ವಿದೇಶಾಂಗ ಇಲಾಖೆ ಸಮಜಾಯಿಷಿ ನೀಡಿದೆ.

ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ ಈ ಮಾಹಿತಿ ನೀಡಿದ್ದಾರೆ. ಭಾರತ ಮತ್ತು ಚೀನದ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಪರಸ್ಪರ ಚರ್ಚೆ ನಡೆಸುತ್ತಿವೆ.

ಉಭಯ ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು 1993ರಿಂದ ಈ ತನಕ ಐದು ವಿವಿಧ ಒಪ್ಪಂದಗಳು ಜಾರಿಯಲ್ಲಿವೆ. ಹೀಗಾಗಿ ಯಾರ ಮಧ್ಯಸ್ಥಿಕೆಯೂ ಬೇಡ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರು ನೇರವಾಗಿಯೇ ವಿವಾದದ ಬಗ್ಗೆ ಮಧ್ಯಸ್ಥಿಕೆ ನಡೆಸುತ್ತೇನೆ ಎಂದು ಹೇಳಿದ್ದಾರೆಯೇ ಎಂಬ ಪ್ರಶ್ನೆಗೆ ವಕ್ತಾರರು ಮೌನವಾಗಿಯೇ ಉಳಿದರು.

ಶಾಂತಿಗೆ ಬದ್ಧ: ಪೂರ್ವ ಲಡಾಖ್‌ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಭಾರತ ಶಾಂತಿ ಸ್ಥಾಪನೆಗೆ ಬದ್ಧವಾಗಿದೆ ಎಂದರು. ದೇಶದ ಸೇನೆ ಗಡಿಯಲ್ಲಿ ಜವಾಬ್ದಾರಿಯುತವಾಗಿಯೇ ಹೊಣೆ ನಿಭಾಯಿಸಿದೆ ಎಂದರು.

Advertisement

ತಿಳಿಗೊಳ್ಳದ ಸಂದಿಗ್ಧತೆ: ಇದೇ ವೇಳೆ ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಪರಿಸ್ಥಿತಿ ತಿಳಿಯಾಗಿಲ್ಲ. ಗ್ಯಾಲ್ವನ್‌ ಕಣಿವೆ ಹಾಗೂ ಪಾಂಗೊಂಗ್‌ ತ್ಸೊ ಪ್ರಾಂತ್ಯಗಳ ಒಟ್ಟು ನಾಲ್ಕು ಕಡೆ ಇಬ್ಬದಿಯ ಸೈನಿಕರು ಗಣನೀಯ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವುದು ಇನ್ನೂ ಮುಂದುವರಿದಿದೆ.

ಭಾರತ ಮತ್ತು ಚೀನದ ನೈಜ ಗಡಿಯಲ್ಲಿ ಸೈನಿಕರ ಮುಖಾಮುಖಿ ಉಂಟಾಗಿಲ್ಲ ಎಂದು ಚೀನ ಸೇನೆ ಹೇಳಿದೆ. ಆದರೆ, ಚೀನ ಹೇಳಿದ್ದೇ ಬೇರೆ, ಅಲ್ಲಿ ನಡೆಯುತ್ತಿರುವುದೇ ಬೇರೆ ಎನ್ನುವಂತಾಗಿದೆ.

ಪಾಂಗೊಂಗ್‌ ತ್ಸೋ ಸರೋವರ ಬಳಿಯ ಒಂದು ಕಡೆ ಹಾಗೂ ಗ್ಯಾಲ್ವನ್‌ ಕಣಿವೆಯ ಮೂರು ಕಡೆಯಲ್ಲಿರುವ ನೈಜ ಗಡಿ ರೇಖೆಗೆ ತೀರಾ ಹತ್ತಿರದವರೆಗೂ ತನ್ನ ಸೈನಿಕರನ್ನು ಚೀನ ಸೇನೆ ರವಾನಿಸಿರುವುದು ಖಚಿತವಾಗಿದೆ.

ಭಾರತ- ಚೀನ ನಡುವೆ ಉದ್ಭವಿಸಿರುವ ಗಡಿಬಿಕ್ಕಟ್ಟಿನ ವಿಚಾರದ ಬಗ್ಗೆ ವಿಶ್ವಸಂಸ್ಥೆಯೂ ಈಗ ಧ್ವನಿಯೆತ್ತಿದೆ. ಎರಡೂ ರಾಷ್ಟ್ರಗಳ ನಡುವೆ ತಲೆದೋರಿರುವ ಗಡಿ ಸಮಸ್ಯೆಯನ್ನು ಪರಸ್ಪರ ಮಾತುಕತೆಯಿಂದ ಬಗೆ ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next