ನವದೆಹಲಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭಾರತ ಕಟು ಶಬ್ದಗಳಿಂದ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಸುಳ್ಳಿನ ಕಥೆ ಹೆಣೆದು ಆರೋಪಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡಿರುವ ಭಾರತ, ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ಎತ್ತಿ ತೋರಿಸಿರುವುದಾಗಿ ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ವಿಷಯ ಪ್ರಸ್ತಾಪಿಸುತ್ತಿರುವುದನ್ನು ಪ್ರತಿಭಟಿಸಿ ಭಾರತದ ರಾಯಭಾರಿ ಮಿಜಿಟೋ ವಿನಿಟೋ ತಕ್ಕ ತಿರುಗೇಟು ನೀಡಿ ಸಭಾತ್ಯಾಗ ಮಾಡಿರುವುದಾಗಿ ವರದಿ ತಿಳಿಸಿದೆ.
ಭಾರತದ ಆಂತರಿಕ ವಿಚಾರದ ಬಗ್ಗೆ ಮೂಗು ತೂರಿಸುತ್ತಿರುವ ಈ ದೇಶ (ಪಾಕಿಸ್ತಾನ) ಕುಖ್ಯಾತ ಮತ್ತು ಭೂಗತ ಪಾತಕಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. ಅಷ್ಟೇ ಅಲ್ಲ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಕುಖ್ಯಾತ ಉಗ್ರಗಾಮಿಗಳು ಕೂಡಾ ಇದೇ ದೇಶದವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತದ ಮೇಲೆ ಗೂಬೆ ಕೂರಿಸುತ್ತಿರುವ ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ ನಲ್ಲಿ ಕಳೆದ ವರ್ಷ ನಡೆದಿದ್ದ ಅಧಿವೇಶನದಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಹೇಗೆ ಹುತಾತ್ಮ ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಅಲ್ಲದೇ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಮತ್ತು ಅಫ್ಘಾನಿಸ್ತಾನದಲ್ಲಿ ತಮ್ಮ ದೇಶದ 40, 000 ಉಗ್ರರು ಹೋರಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು ಎಂದು ವಿನಿಟೋ ತಿರುಗೇಟು ನೀಡಿರುವುದಾಗಿ ವರದಿ ವಿವರಿಸಿದೆ.
ಧಾರ್ಮಿಕವಾಗಿಯೂ ಕಿರುಕುಳ ನೀಡುವುದರಲ್ಲಿ ಪಾಕಿಸ್ತಾನ ಹಿಂದೆ ಬಿದ್ದಿಲ್ಲ ಎಂದಿರುವ ವಿನಿಟೋ, ಈ ದೇಶ ವ್ಯವಸ್ಥಿತವಾಗಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಕ್ರಿಶ್ಚಿಯನ್, ಸಿಖ್ ಹಾಗೂ ಇತರ ಧರ್ಮಗಳ ಜನರ ಮೇಲೆ ಧಾರ್ಮಿಕ ನಿಂದನೆ ಕಾಯ್ದೆಯನ್ನು ಬಳಸಿಕೊಂಡು ಕೇಸು ದಾಖಲಿಸುವುದು ಹಾಗೂ ಬಲವಂತವಾಗಿ ಮತಾಂತರ ಮಾಡುವ ಮೂಲಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದರು.