ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 40 ಸಾವಿರ ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ ಖರೀದಿ ಸೇರಿದಂತೆ 8 ಐತಿಹಾಸಿಕ ಒಪ್ಪಂದಗಳಿಗೆ ಉಭಯದೇಶಗಳು ಸಹಿ ಹಾಕಿವೆ.
ವಿಶ್ವದ ದೊಡ್ಡಣ್ಣ ಅಮೆರಿಕದ ಆರ್ಥಿಕ ದಿಗ್ಬಂಧನದ ಬೆದರಿಕೆಯ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಆಗಮಿಸಿದ್ದರು. ಇಂದು ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ನಡೆದ 19ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ 5.43 ಬಿಲಿಯನ್ ಡಾಲರ್ ಮೊತ್ತದ ಐದು ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ವಾಯುರಕ್ಷಣಾ ವ್ಯವಸ್ಥೆ ಖರೀದಿಗೆ ಸಹಿ ಹಾಕಿವೆ.
ಹಲವು ಕ್ಷಿಪಣಿ ಮತ್ತು ಯುದ್ಧ ವಿಮಾನಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನದ ಎಸ್ 400 ಟ್ರಂಫ್ ಕ್ಷಿಪಣಿ ಸೇರಿದಂತೆ ರಷ್ಯಾದ ಜೊತೆ ಯಾವುದೇ ರಕ್ಷಣಾ ವ್ಯವಹಾರ ನಡೆಸದಂತೆ ಅಮೆರಿಕಾ ಎಚ್ಚರಿಕೆ ನೀಡಿತ್ತು. ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಹಾಗೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಂತ್ರಗಾರಿಕೆ ನಡೆಸಿದೆ ಎಂಬ ಆರೋಪದಡಿಯಲ್ಲಿ ರಷ್ಯಾ ಜೊತೆ ವ್ಯವಹಾರ ನಡೆಸಬಾರದು. ಒಂದು ವೇಳೆ ಎಚ್ಚರಿಕೆ ಲೆಕ್ಕಿಸದೇ ವ್ಯವಹಾರ ನಡೆಸಿದರೆ ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ವಿಶ್ವ ಸಮುದಾಯಕ್ಕೆ ಈಗಾಗಲೇ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಿಕೊಳ್ಳಬಹುದು.