ಸಿದ್ದಾಪುರ, ಸೆ. 26: ಭಾರತೀಯ ಶಿಕ್ಷಣ, ಸಂಸ್ಕಾರ ರಾಷ್ಟ್ರ ನಿಷ್ಠೆಯನ್ನು ಬೆಳೆಸುತ್ತದೆ. ಭಾರತವು ವ್ಯಾಪಾರೀಕರಣದ ಮೇಲೆ ನಿಲ್ಲದೆ ಜ್ಞಾನ ಆಧಾರದ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಭಾರತಿ ಸಂಸ್ಥೆಯು ಭಾರತೀಯ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ. ಜಗತ್ತಿನಲ್ಲಿ ಪರಿವರ್ತನೆಯ ಯುಗ ಆರಂಭಗೊಂಡಿದೆ. ಜಗತ್ತಿನ ಚಿತ್ತ ಭಾರತದತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಚಿಂತನೆ ಯುವಕರಲ್ಲಿ ಹರಿಯ ಬಿಡಬೇಕು. ಭಾರತವು ವಿಶ್ವದ ಜ್ಞಾನದ ಕೇಂದ್ರವಾಗಬೇಕು ಎಂದು ವಿದ್ಯಾಭಾರತಿ ಕರ್ನಾಟಕದ ಪ್ರಾಂತ್ಯದ ಕಾರ್ಯದರ್ಶಿ ವಸಂತ ಮಾಧವ ಕಲ್ಲಡ್ಕ ಅವರು ಹೇಳಿದರು.
ಅವರು ಸಿದ್ದಾಪುರ ಸರಸ್ವತಿ ವಿದ್ಯಾಲಯದಲ್ಲಿ ವಿದ್ಯಾಭಾರತಿ ಕರ್ನಾಟಕದ ವತಿಯಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ವಿದ್ಯಾಭಾರತಿಯ ಜಿಲ್ಲಾಧ್ಯಕ್ಷ ಟಿ. ಜಿ. ಪಾಂಡುರಂಗ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಿದ್ದಾಪುರ ಸರಸ್ವತಿ ವಿದ್ಯಾಲಯದ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಸ್ವಾಗತಿಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಸರೋಜಾ ಮತ್ತು ಪೂರ್ಣಿಮಾ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪ್ರಶಾಂತ ಪಿ. ಐರಬೈಲು ವಂದಿಸಿದರು.