ಮುಂಬಯಿ: ಆರಂಭಿಕ ಆಟಗಾರ್ತಿ ಫೋಬ್ ಲಿಚ್‌ಫೀಲ್ಡ್ ಅವರ ಆಕರ್ಷಕ ಶತಕ, ದಾಖಲೆ ಜತೆ ಯಾಟ ಹಾಗೂ ದಾಖಲೆ ಮೊತ್ತದಿಂದ ವಿಜೃಂಭಿಸಿದ ಆಸ್ಟ್ರೇಲಿಯ, ಭಾರತದೆ ದುರಿನ ವನಿತಾ ಏಕದಿನ ಸರಣಿ ಯನ್ನು 3-0 ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. 3ನೇ ಪಂದ್ಯದಲ್ಲಿ 190 ರನ್ನುಗಳ ಸೋಲಿಗೆ ತುತ್ತಾದ ಕೌರ್ ಬಳಗ ವರ್ಷಾರಂಭದಲ್ಲೇ ಭಾರೀ ಮುಖಭಂಗ ಅನುಭವಿಸಿದೆ.
ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇ ಲಿಯ 7ಕ್ಕೆ 338 ರನ್ ಪೇರಿಸಿತು. ಇದು ಏಕದಿನದಲ್ಲಿ ಆಸೀಸ್ ತಂಡದ ಗರಿಷ್ಠ ಗಳಿಕೆ ಆಗಿದೆ. ಜವಾಬಿತ್ತ ಭಾರತ 32.4 ಓವರ್‌ಗಳಲ್ಲಿ 148ಕ್ಕೆ ಸರ್ವಪತನ ಕಂಡಿತು. ಇದು ಭಾರತದ ವಿರುದ್ಧ ಆಸ್ಟ್ರೇಲಿಯ ಸಾಧಿಸಿದ 9ನೇ ಸರಣಿ ಜಯ. ಭಾರತದ ನೆಲದಲ್ಲಿ ಒಲಿದ 5ನೇ ಸರಣಿ ಗೆಲುವು.
ಸರಣಿಯುದ್ದಕ್ಕೂ ಪ್ರಚಂಡ ಆಟ ವಾಡಿದ ಲಿಚ್‌ಫೀಲ್ಡ್ 119 ರನ್ ಬಾರಿಸಿ ಮೆರೆದರು. ಇದು ಅವರ ದ್ವಿತೀಯ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. 128 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು. ಲಿಚ್‌ಫೀಲ್ಡ್ ಮೊದಲೆರಡು ಪಂದ್ಯಗಳಲ್ಲಿ 78 ಹಾಗೂ 63 ರನ್ ಮಾಡಿದ್ದರು.
ಅಲಿಸ್ಸಾ ಹೀಲಿ 82 ರನ್ ಸಿಡಿಸಿದರು (85 ಎಸೆತ, 4 ಬೌಂಡರಿ, 3 ಸಿಕ್ಸರ್). ಈ ಜೋಡಿ 28.5 ಓವರ್ ನಿಭಾಯಿಸಿ 189 ರನ್ ಪೇರಿಸಿತು. ಇದು ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಪ್ರವಾಸಿ ತಂಡದ ಜೋಡಿಯೊಂದು ಭಾರತ ದಲ್ಲಿ ದಾಖಲಿಸಿದ ಅತ್ಯಧಿಕ ಮೊತ್ತದ ಜತೆಯಾಟವಾಗಿದೆ. 2021ರಲ್ಲಿ ದ. ಆಫ್ರಿಕಾದ ಲಿಝೆಲ್ ಲೀ ಮತ್ತು ಲಾರಾ ವೋಲ್ವಾರ್ಟ್ ಮೊದಲ ವಿಕೆಟಿಗೆ 169 ರನ್ ಒಟ್ಟುಗೂಡಿಸಿದ್ದು ದಾಖಲೆ ಆಗಿತ್ತು.
ದೊಡ್ಡ ಮೊತ್ತವನ್ನು ಬೆನ್ನಟ್ಟತೊಡ ಗಿದ ಭಾರತ ಬ್ಯಾಟಿಂಗ್‌ನಲ್ಲೂ ಘೋರ ವೈಫಲ್ಯ ಕಂಡಿತು. 29 ರನ್ ಗಳಿಸಿದ ಮಂಧನಾ ಅವರದೇ ಹೆಚ್ಚಿನ ಗಳಿಕೆ. ಜೆಮಿಮಾ ಮತ್ತು ದೀಪ್ತಿ ತಲಾ 25 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-7 ವಿಕೆಟಿಗೆ 338 (ಲಿಚ್‌ಫೀಲ್ಡ್ 119, ಹೀಲಿ 82, ಗಾರ್ಡನರ್ 30, ಶ್ರೇಯಾಂಕಾ 57ಕ್ಕೆ 3, ಅಮನ್‌ಜೋತ್ 70ಕ್ಕೆ 2). ಭಾರತ-32.4 ಓವರ್‌ಗಳಲ್ಲಿ 148 (ಮಂಧನಾ 29, ಜೆಮಿಮಾ 25, ದೀಪ್ತಿ 25, ವೇರ್‌ಹ್ಯಾಮ್ 23ಕ್ಕೆ 3, ಅನ್ನಾಬೆಲ್ 29ಕ್ಕೆ 2).