ಮಹಾನಗರ: ಭಾರತ ಸೇವಾದಳ ಜಿಲ್ಲಾ ಸಮಿತಿ, ಮಂಗಳೂರು ತಾಲೂಕು ಸಮಿತಿ, ಜಿ.ಪಂ. ಶಾಲೆ ಮಲ್ಲಿಕಟ್ಟೆ ಆಶ್ರಯದಲ್ಲಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಕ ಆಂದೋಲನ ಕಾರ್ಯಕ್ರಮವನ್ನು ಮೇ 30ರಂದು ಮಲ್ಲಿಕಟ್ಟೆಯಲ್ಲಿರುವ ಜಿ.ಪಂ. ಶಾಲೆಯಲ್ಲಿ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಭಾರತ ಸೇವಾದಳದ ಅಧ್ಯಕ್ಷ ಬಶೀರ್ ಬೈಕಂಪಾಡಿಯವರು ಈಗಾಗಲೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿರುವುದರಿಂದ ಇದನ್ನು ಹೆಚ್ಚಿಸಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಕೆಲವೊಂದು ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಪ್ರಾರಂಭಿಸಲಾಗಿದೆ.
ಸರಕಾರಿ ಶಾಲೆಗಳಲ್ಲಿ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಅಕ್ಷರ ದಾಸೋಹ ಕಾರ್ಯಕ್ರಮ, ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ ಸಹಿತ ಹಲವಾರು ಸೌಲಭ್ಯಗಳನ್ನು ಸರಕಾರ ನೀಡಿದೆ. ಇದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಸಹಕಾರಿಯಾಗಲಿದೆ ಎಂದರು.
ಭಾರತ ಸೇವಾದಳದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಲ್ಲಿಕಟ್ಟೆ ಪ್ರದೇಶದ ಮುಖ್ಯ ರಸ್ತೆಗಳಲ್ಲಿರುವ ಅಂಗಡಿಗಳಿಗೆ ತರಳಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಪ್ರಚಾರ ನಡೆಸಬೇಕೆಂದು ವಿನಂತಿಸಿದರು.
ಸೇವಾದಳದ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ತಾಲೂಕು ಉಪಾಧ್ಯಕ್ಷ ಪ್ರದೀಪ್ ಬೇಕಲ್, ಪ್ರೇಮ್ ಚಂದ್, ಮುಖ್ಯ ಸಂಘಟಕ ಮಂಜೇಗೌಡ, ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋಲ ಸಿಲ್ವಿಯಾ ಪಿಂಟೋ ಶಿಕ್ಷಕಿಯರಾದ ಕುಮುದಿನಿ, ಸುಚಿತಾ ನಾಯಕ್, ಅನ್ಸಿಲಾ ಮೀನಾ ಡೇಸಾ, ಡೋರಾ ಕಾರ್ಮಿಕ್ ಡಿಸಿಲ್ವ, ಮಮತಾ ಎ, ಸವಿತಾ ಕೆ., ಪುಷ್ಪಾವತಿ, ಡೋರ್ತಿ ಜೆ.ಜೆ. ಪಾಯಸ್, ಜಯಂತಿ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.