Advertisement
ಗಡಿ ಭಾಗದಲ್ಲಿ ಚೀನ ಸೇನೆ ಸಮರಾಭ್ಯಾಸ, ಗಸ್ತು ಕಾರ್ಯ ಮತ್ತಿತರ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಭಾರತದ ವಿರುದ್ಧ ಸಂಚು ರೂಪಿಸುತ್ತಲೇ ಬಂದಿದೆ. ಇದೀಗ ಚೀನ ಮತ್ತೆ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಸೇನಾ ಗ್ರಾಮಗಳನ್ನು ನಿರ್ಮಿಸಿರುವ ಬಗೆಗೆ ವರದಿಯಾಗಿದೆ. ಅಷ್ಟು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಎಲ್‌ಎಸಿಯಲ್ಲಿ ನಿಯೋಜಿಸುವ ಮೂಲಕ ಭಾರತದ ವಿರುದ್ಧ ಪರೋಕ್ಷ ದಾಳಿಗೆ ಸಜ್ಜಾಗುತ್ತಿರುವುದು ಬೆಳಕಿಗೆ ಬಂದಿದೆ.
Related Articles
Advertisement
ಏತನ್ಮಧ್ಯೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೆಲವು ತಿಂಗಳುಗಳಿಂದೀಚೆಗೆ ಸ್ಥಳೀಯ ಬಂಡುಕೋರ ಸಂಘಟನೆಗಳು ಮತ್ತೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ರಾಜ್ಯಗಳಲ್ಲಿ ನಿಯೋಜಿಸಲಾಗಿದ್ದ ಸೇನಾ ಪಡೆಗಳನ್ನು ಹಂತಹಂತವಾಗಿ ವಾಪಸು ಕರೆಸಿಕೊಳ್ಳಲು ನಿರ್ಧರಿಸಿತ್ತು. ಆದರೆ ವಾರದ ಹಿಂದೆ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಬಂಡುಕೋರ ಸಂಘಟನೆಗಳು ಭೀಕರ ದಾಳಿ ನಡೆಸಿದ್ದರಿಂದ ಮತ್ತೆ ಈ ರಾಜ್ಯಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.
ಇದೇ ವೇಳೆ ದೇಶದ ಹಲವೆಡೆ ನಕ್ಸಲ್ ಚಟುವಟಿಕೆಗಳು ಕೂಡ ಹೆಚ್ಚಳವಾಗಿದೆ. ಸರಕಾರದ ಬಿಗು ನಿಲುವಿನಿಂದಾಗಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಕ್ಸಲ್ ಮತ್ತು ಇತರ ಬಂಡುಕೋರ ಸಂಘಟನೆಗಳ ಚಟುವಟಿಕೆಗಳು ಕ್ಷೀಣಿಸಿದ್ದವು. ಆದರೆ ಇದೀಗ ಈ ಸಂಘಟನೆಗಳು ಮತ್ತೆ ಬಾಲ ಬಿಚ್ಚಲಾರಂಭಿಸಿದ್ದು ಭದ್ರತಾ ಪಡೆಗಳು, ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ನಾಗರಿಕರ ಸುರಕ್ಷೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಸಂಘಟನೆಗಳಿಗೆ ಪರೋಕ್ಷವಾಗಿ ಚೀನ ಮತ್ತು ಪಾಕಿಸ್ಥಾನ ಬೆಂಬಲ ನೀಡುತ್ತಿರುವುದು ಸರಕಾರದ ಗಮನಕ್ಕೂ ಬಂದಿದೆ.
ಈ ಎಲ್ಲ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮೊಳಕೆಯಲ್ಲಿಯೇ ಹೊಸಕಿ ಹಾಕಲು ಕೇಂದ್ರ ಸರಕಾರ ತೀರ್ಮಾನಿಸಿದೆ. ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಶಾಂತಿಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರ ಘೋಷಿಸುವ ಮೂಲಕ ಎಲ್ಲ ತೀವ್ರಗಾಮಿ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.