ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2.34 ಲಕ್ಷ ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದೇ ವೇಳೆ 893 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ವರದಿಯಂತೆ ದೈನಂದಿನ ಪಾಸಿಟಿವಿಟಿ ದರವು ಶೇಕಡಾ 13.39 ರಿಂದ ಶೇಕಡಾ 14.50 ಕ್ಕೆ ಏರಿದೆ, ಆದರೆ ವಾರದ ಪಾಸಿಟಿವಿಟಿ ರೇಟ್ ಶೇಕಡಾ 16.40 ರಷ್ಟು ದಾಖಲಾಗಿದೆ.
ಕರ್ನಾಟಕದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳು ಶುಕ್ರವಾರ 50 ರಿಂದ ಶನಿವಾರ 70 ಕ್ಕೆ ಏರಿಕೆಯಾಗಿದೆ. 33,337 ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಮತ್ತು ಸಾವುಗಳ ಸಂಖ್ಯೆ ಕ್ರಮವಾಗಿ 37,57,031 ಮತ್ತು 38,874 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಪುಲ್ವಾಮಾ ಬ್ಲಾಸ್ಟ್ ರೂವಾರಿ ಜಾಹಿದ್ ವಾನಿ ಸೇರಿ ಐವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ ದೈನಂದಿನ ಸೋಂಕುಗಳು ಇಳಿಕೆ ಕಂಡಿದ್ದು, ಶನಿವಾರ 27,971 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 85 ಒಮಿಕ್ರಾನ್ ಸೋಂಕುಗಳು ಸೇರಿವೆ. ಕಳೆದ 24 ಗಂಟೆಗಳಲ್ಲಿ 61 ಮಂದಿ ಸೋಂಕಿತರು ಸಾವುನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೇರಳ ರಾಜ್ಯದಲ್ಲಿ ಶನಿವಾರ 50,812 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಎಂಟು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳ ರಾಜ್ಯದಲ್ಲಿ 3,33,447 ಸಕ್ರಿಯ ಪ್ರಕರಣಗಳಿದ್ದು, 1,629 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.