Advertisement
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (159) ಮತ್ತು ಕನ್ನಡಿಗ ಕೆ.ಎಲ್. ರಾಹುಲ್ (102) ಅವರ ಶತಕದಬ್ಬರ ಮತ್ತು ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್ (53) ಹಾಗೂ ರಿಷಭ್ ಪಂತ್ (39) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ನಿಗದಿತ 50 ಓವರುಗಳಲ್ಲಿ 05 ವಿಕೆಟ್ ಕಳೆದುಕೊಂಡು 387 ರನ್ ಕಲೆ ಹಾಕಿದೆ ಮತ್ತು ಈ ಮೂಲಕ ಕೆರಿಬಿಯನ್ನರ ಗೆಲುವಿಗೆ 388 ರನ್ ಗಳ ಬೃಹತ್ ಗುರಿಯನ್ನು ನಿಗದಿ ಮಾಡಿದೆ.
ಆದರೆ ಇಲ್ಲಿ ಭಾರತೀಯ ಆರಂಭಿಕ ಜೋಡಿ ಬ್ಯಾಟ್ ಬೀಸಿದ ರೀತಿಗೆ ಇಂಡೀಸ್ ಬೌಲರ್ ಗಳು ತತ್ತರಿಸಿಹೋದರು. ಅದರಲ್ಲೂ ರೋಹಿತ್ ಶರ್ಮಾ ಅವರಂತೂ ಈ ಅಂಗಣದಲ್ಲಿ ರನ್ ಮಳೆಯನ್ನೇ ಹರಿಸಿದರು. 44ನೇ ಓವರಿನವರೆಗೆ ಕ್ರೀಸ್ ಆಕ್ರಮಿಸಿಕೊಂಡ ರೋಹಿತ್ ತನ್ನ ಭರ್ಜರಿ ಇನ್ನಿಂಗ್ಸ್ ನಲ್ಲಿ 17 ಬೌಂಡರಿ ಮತ್ತು 05 ಸಿಕ್ಸರ್ ಸಿಡಿಸಿ 159 ರನ್ ಬಾರಿಸಿದರು. ಇದು ರೋಹಿತ್ ಏಕದಿನ ವೃತ್ತಿಬದುಕಿನ 27ನೇ ಶತಕವಾಗಿದೆ.
ಇತ್ತ ಒಂದು ಬದಿಯಿಂದ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದರೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಶರ್ಮಾ ಅವರಿಗೆ ಉತ್ತಮ ಬೆಂಬಲ ನೀಡಿದರು. ರೋಹಿತ್ ಅಬ್ಬರದ ನಡುವೆಯೇ ರಾಹುಲ್ ಅವರು ಶತಕ ದಾಖಲಿಸಿ ಮಿಂಚಿದರು. ರಾಹುಲ್ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ಎಸೆತೆಗಳಲ್ಲಿ 102 ರನ್ ದಾಖಲಿಸಿದರು. ಶರ್ಮಾ – ರಾಹುಲ್ ಜೋಡಿ 36.6 ಓವರ್ ಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡು 227 ರನ್ ಗಳ ಭರ್ಜರಿ ಜೊತೆಯಾಟವನ್ನು ದಾಖಲಿಸಿತು.
ರಾಹುಲ್ ಔಟಾದೊಡನೆ ಕ್ರೀಸಿಗೆ ಬಂದ ನಾಯಕ ಕೊಹ್ಲಿ (0) ಒಂದೇ ಎಸೆತಕ್ಕೆ ಆಟ ಮುಗಿಸಿದರು. ಈ ಹಂತದಲ್ಲಿ ಶರ್ಮಾ ಅವರಿಗೆ ಜೊತೆಯಾದ ಶ್ರೇಯಸ್ ಅಯ್ಯರ್ ತಾನೂ ಸಿಡಿಲಾರಂಭಿಸಿದರು. 32 ಎಸೆತೆಗಳಲ್ಲಿ 53 ರನ್ ದಾಖಲಿಸುವ ಮೂಲಕ ಅಯ್ಯರ್ ತನ್ನ ಬ್ಯಾಟಿಂಗ್ ತಾಕತ್ತನ್ನು ಪ್ರದರ್ಶಿಸಿದರು.
Related Articles
Advertisement