Advertisement

ಭಾರತ-ಸೌದಿ ಬಾಂಧವ್ಯಕ್ಕೆ ಶಕ್ತಿ; ಪ್ರಧಾನಿ ಮೋದಿ-ಸೌದಿ ರಾಜಕುಮಾರ ಮೊದಲ ವ್ಯೂಹಾತ್ಮಕ ಮಾತುಕತೆ

08:32 PM Sep 11, 2023 | Team Udayavani |

ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ.

Advertisement

ಸೌದಿ ಅರೇಬಿಯಾದ ಪ್ರಧಾನಿ, ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಬಿನ್‌ ಅಬ್ದುಲ್‌ಅಜೀಜ್‌ ಅಲ್‌ ಸೌದ್‌ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇಂಧನ ಭದ್ರತೆ, ವ್ಯಾಪಾರ, ಹೂಡಿಕೆ, ರಕ್ಷಣೆ, ಆರೋಗ್ಯ ಸೇವೆ, ಆಹಾರ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಸಾಧಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಫೆಬ್ರವರಿ 2019ರ ಬಳಿಕ ಸೌದಿ ರಾಜಕುಮಾರ ಸಲ್ಮಾನ್‌ ಅವರ ಮೊಹಮ್ಮದ್‌ ಅವರ 2ನೇ ವಿದೇಶ ಪ್ರವಾಸ ಇದಾಗಿದೆ. ಸೆ.8ರಂದು ಜಿ20 ಶೃಂಗದಲ್ಲಿ ಭಾಗಿಯಾಗಲೆಂದು ಅವರು ದೆಹಲಿಗೆ ಆಗಮಿಸಿದ್ದರು. ಜಿ20 ಶೃಂಗದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್‌ ಕಾರಿಡಾರ್‌ ಸ್ಥಾಪನೆ ಕುರಿತ ಮಹತ್ವದ ಘೋಷಣೆ ಬೆನ್ನಲ್ಲೇ ಉಭಯ ನಾಯಕರ ಮಾತುಕತೆ ಮಹತ್ವ ಪಡೆದಿದೆ.

ಚರ್ಚೆಯಾದ ಪ್ರಮುಖ ವಿಚಾರಗಳು:
ಪಶ್ಚಿಮ ಕರಾವಳಿ ತೈಲ ಸಂಸ್ಕರಣಾಗಾರ ಯೋಜನೆಗಳಿಗೆ ವೇಗ ನೀಡುವ ಉದ್ದೇಶದಿಂದ ಜಂಟಿ ಕಾರ್ಯಪಡೆ ರಚಿಸುವ ಕುರಿತು ಉಭಯ ದೇಶಗಳು ನಿರ್ಧರಿಸಿವೆ. ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತ-ಗಲ್ಫ್ ಸಹಕಾರ ಮಂಡಳಿ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ನಿರ್ಧಾರವನ್ನೂ ಆದಷ್ಟು ಬೇಗ ಕೈಗೊಳ್ಳುವ ಕುರಿತು ಚರ್ಚೆ ನಡೆದಿದೆ.

“ಭಾರತಕ್ಕೆ ಸೌದಿ ಅರೇಬಿಯಾವು ಅತ್ಯಂತ ಪ್ರಮುಖ ವ್ಯೂಹಾತ್ಮಕ ಪಾಲುದಾರ ರಾಷ್ಟ್ರ’ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಇದೇ ವೇಳೆ, ಜಿ20 ಶೃಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಭಾರತದ ಬಗ್ಗೆ ಮೊಹಮ್ಮದ್‌ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

ಚೀನದಿಂದಲೂ ಮೆಚ್ಚುಗೆ:
ಅಚ್ಚರಿಯ ಬೆಳವಣಿಗೆಯಲ್ಲಿ, ಸರ್ವಸಮ್ಮತವಾಗಿ “ನವದೆಹಲಿ ಘೋಷಣೆ’ ಅಂಗೀಕಾರಗೊಂಡಿರುವುದರ ಬಗ್ಗೆ ನೆರೆಯ ಚೀನಾ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದೆ. ಜಿ20 ನಿರ್ಣಯವು ಸಕಾರಾತ್ಮಕ ಸಂದೇಶವನ್ನು ನೀಡಿದ್ದು, ಜಾಗತಿಕ ಸವಾಲುಗಳು ಮತ್ತು ಆರ್ಥಿಕ ಚೇತರಿಕೆ ವಿಚಾರದಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಕೈಜೋಡಿಸುತ್ತಿರುವುದು ಉತ್ತಮ ವಿಷಯ ಎಂದು ಚೀನಾ ಹೇಳಿದೆ.

ಭದ್ರತೆ:
ಜಿ20 ಶೃಂಗದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಅಳವಡಿಸಲಾಗಿರುವ ಕಲಾಕೃತಿಗಳು, ಪ್ರತಿಮೆಗಳು, ಹೂಕುಂಡಗಳು, ಕಾರಂಜಿ ಮತ್ತಿತರ ಆಕರ್ಷಕ ವಸ್ತುಗಳ ಕಳ್ಳತನ ಅಥವಾ ಹಾನಿ ತಡೆಯಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿದ್ದೇವೆ ಎಂದು ನವದೆಹಲಿ ಮಹಾನಗರ ಪಾಲಿಕೆ ಹೇಳಿದೆ. ಒಟ್ಟು 65 ಕಾರಂಜಿಗಳು ಮತ್ತು 20 ಕಲಾಕೃತಿಗಳು, 1 ಲಕ್ಷ ಹೂಕುಂಡಗಳನ್ನು ರಸ್ತೆಯ ಇಕ್ಕೆಲಗಳಲ್ಲೂ ಅಳವಡಿಸಲಾಗಿತ್ತು.

ಬೈಡೆನ್‌ ಅಚ್ಚರಿ ಹೇಳಿಕೆ:
ಈ ನಡುವೆ, ವಿಯೆಟ್ನಾಂ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು, “ಭಾರತದಲ್ಲಿ ಜಿ20 ಶೃಂಗದ ವೇಳೆ ಪ್ರಧಾನಿ ಮೋದಿಯವರಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಮಾಧ್ಯಮ ಸ್ವಾತಂತ್ರ್ಯ ಎತ್ತಿಹಿಡಿಯುವ ಬಗ್ಗೆ ಧ್ವನಿಯೆತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ದ್ವಿಪಕ್ಷೀಯ ಮಾತುಕತೆ ಕುರಿತು ಭಾನುವಾರ ಬಿಡುಗಡೆಯಾಗಿದ್ದ ಜಂಟಿ ಹೇಳಿಕೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿರಲಿಲ್ಲ. ಸೋಮವಾರ ಈ ಕುರಿತು ಪ್ರತಿಕ್ರಿಯಿಸುತ್ತಾ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, “ಬೈಡೆನ್‌ ಅವರ ತಂಡಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಲು ಮತ್ತು ಪ್ರಶ್ನೆಗೆ ಉತ್ತರಿಸಲು ಸರ್ಕಾರ ಅವಕಾಶವನ್ನೇ ನೀಡಿರಲಿಲ್ಲ’ ಎಂದು ಆರೋಪಿಸಿದ್ದಾರೆ.

ರಿಷಿ-ಹಸೀನಾ ಫೋಟೋ ವೈರಲ್‌
ಶೃಂಗದ ನೇಪಥ್ಯದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗಿನ ಯುಕೆ ಪ್ರಧಾನಿ ರಿಷಿ ಸುನಕ್‌ ಅವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಸೀನಾ ಅವರು ಮರದ ಕುರ್ಚಿಯಲ್ಲಿ ಕುಳಿತಿದ್ದರೆ, ಬರಿಗಾಲಲ್ಲೇ ಅವರ ಬಳಿ ಬರುವ ಸುನಕ್‌ ಮಂಡಿಯೂರಿ ಕುಳಿತು ಹಸೀನಾರೊಂದಿಗೆ ಕುಶಲೋಪರಿ ವಿಚಾರಿಸುತ್ತಾರೆ. ಅವರ ಈ ಸರಳತೆ, ವಿಧೇಯತೆ, ಪ್ರೀತಿ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, “ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯಾಗಿದ್ದರೂ ಸ್ವಲ್ಪವೂ ಅಹಂ ಇಲ್ಲ’ ಎಂದು ಶ್ಲಾಘಿಸಿದ್ದಾರೆ.

ಒಮ್ಮತದ ನಿರ್ಣಯದ ಹಿಂದಿದ್ದ ಕಾಣದ ಕೈಗಳು
ಜಿ20 ಶೃಂಗದ ನಿರ್ಣಯವು ಎಲ್ಲರ ಒಪ್ಪಿಗೆಯೊಂದಿಗೆ ಅಂಗೀಕಾರಗೊಳ್ಳಲು ಕಾರಣರಾದ ಭಾರತದ ಜಿ20 ಶೆರ್ಪಾ ಅಮಿತಾಭ್‌ ಕಾಂತ್‌ ಅವರ ಹಿಂದೆ ನಾಲ್ವರು ಐಎಫ್ಎಸ್‌ ಅಧಿಕಾರಿಗಳು ಕೆಲಸ ಮಾಡಿದ್ದರು. 200 ಗಂಟೆಗಳ ನಿರಂತರ ಮನವೊಲಿಕೆ, 15 ಕರಡು, 300 ದ್ವಿಪಕ್ಷೀಯ ಸಭೆಗಳ ಬಳಿಕ ನಿರ್ಣಯಕ್ಕೆ ಸರ್ವರ ಸಮ್ಮತಿ ದೊರೆತಿತ್ತು. ಈ ಪರಿಶ್ರಮದ ಹಿಂದಿದ್ದ ಕಾಣದ ಕೈಗಳು ಯಾರು ಗೊತ್ತಾ?

1. ಅಭಯ್‌ ಠಾಕೂರ್‌, ಹೆಚ್ಚುವರಿ ಕಾರ್ಯದರ್ಶಿ, ಜಿ20 ಕಾರ್ಯಾಲಯ
1992ರಲ್ಲಿ ಐಎಫ್ಎಸ್‌ಗೆ ಸೇರಿದ ಅಭಯ್‌ ಅವರು ಪ್ರತಿಯೊಂದು ಸಂಧಾನ ಮಾತುಕತೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕೆಲವು ರಾಷ್ಟ್ರಗಳ ಮನವೊಲಿಸುವಲ್ಲಿ ಅವರ ಅನುಭವವೂ ಕೆಲಸಕ್ಕೆ ಬಂತು. ಮಾಸ್ಕೋ, ಲಂಡನ್‌, ಹೋ ಚಿ ಮಿನ್‌ ಸಿಟಿಯಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ, ನೈಜೀರಿಯಾ ಮತ್ತು ಮಾರಿಷಿಯಸ್‌ನಲ್ಲಿನ ಹೈಕಮಿಷನ್‌ನಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.

2. ನಾಗರಾಜ ನಾಯ್ಡು ಕಾಕನೂರ್‌, ಜಂಟಿ ಕಾರ್ಯದರ್ಶಿ, ಜಿ20 ಕಾರ್ಯಾಲಯ
1998ನೇ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ. ಚೀನದಲ್ಲೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದ್ದು, ಸುಲಲಿತವಾಗಿ ಚೀನೀ ಭಾಷೆ ಮಾತಾಡಬಲ್ಲರು. ವಿಶ್ವಸಂಸ್ಥೆಯಲ್ಲೂ ಕಾರ್ಯನಿರ್ವಹಿಸಿರುವ ಕಾಕನೂರ್‌, ಕಠಿಣ ಸಂಧಾನ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಇವರಿಗಿದೆ. ಅಮೆರಿಕದ ಫ್ಲೆಚರ್‌ ಸ್ಕೂಲ್‌ ಆಫ್ ಲಾ ಆ್ಯಂಡ್‌ ಡಿಪ್ಲೊಮೆಸಿಯಲ್ಲಿ ಕಾನೂನು ಮತ್ತು ರಾಜತಾಂತ್ರಿಕತೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

3. ಏನಮ್‌ ಗಂಭೀರ್‌, ಜಂಟಿ ಕಾರ್ಯದರ್ಶಿ, ಜಿ20 ಕಾರ್ಯಾಲಯ
2005ನೇ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ. ಸ್ಪ್ಯಾನಿಶ್‌ ಭಾಷೆಯಲ್ಲಿ ಪರಿಣಿತರಾಗಿರುವ ಏನಮ್‌, ವಿವಿಧ ದೇಶಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಗಣಿತ ಮತ್ತು ಸುಧಾರಿತ ಅಂತಾರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಡಬಲ್‌ ಮಾಸ್ಟರ್ಸ್‌ ಪದವಿ ಪಡೆದಿರುವ ಅವರು, ತಮ್ಮ ಅನುಭವವನ್ನು ಬಳಸಿಕೊಂಡು ಸಂಧಾನ ಮಾತುಕತೆ ವೇಳೆ ಇದ್ದ ಅಡೆತಡೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾದರು.

4. ಆಶಿಷ್‌ ಕುಮಾರ್‌ ಸಿನ್ಹಾ, ಜಂಟಿ ಕಾರ್ಯದರ್ಶಿ, ಜಿ20 ಕಾರ್ಯಾಲಯ
ಐಎಫ್ಎಸ್‌ ಅಧಿಕಾರಿಯಾಗಿ 18 ವರ್ಷಗಳ ಅನುಭವ ಹೊಂದಿದ್ದಾರೆ. ನೈರೋಬಿಯಲ್ಲಿ ಭಾರತದ ಉಪ ಹೈಕಮಿಷನರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯಲ್ಲೂ ಕಾರ್ಯನಿರ್ವಹಿಸಿದ ಅನುಭವವಿದೆ. ಸಂಕೀರ್ಣ ಮಾತುಕತೆಗಳ ವೇಳೆಯೂ ಬಹಳ ಶಾಂತವಾಗಿದ್ದುಕೊಂಡು, ನಿರ್ಣಾಯಕ ನಿಲುವು ಹೊಂದುವ ಸ್ವಭಾವ ಇವರದ್ದು. ಜಿ20 ನಿರ್ಣಯದ ವೇಳೆ ಒಮ್ಮತ ಸಾಧಿಸುವಲ್ಲಿ ಇವರ ಪಾತ್ರ ಹಿರಿದು.

Advertisement

Udayavani is now on Telegram. Click here to join our channel and stay updated with the latest news.

Next