ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ರಷ್ಯಾ ಭೇಟಿ ಈ ಹಿಂದಿನ ಭೇಟಿಗಳಿಗಿಂತ ಭಿನ್ನವಾಗಿತ್ತು. ಈ ಸಲ ಮೋದಿ ರಷ್ಯಾದ ಪೂರ್ವದ ತುದಿಯ ರಾಜಧಾನಿಯಾಗಿರುವ ವ್ಲಾಡಿವೊಸ್ಟಕ್‌ಗೆ ಭೇಟಿ ನೀಡಿದ್ದಾರೆ. ಇಲ್ಲಿ ನಡೆದ ಪೂರ್ವ ಆರ್ಥಿಕ ಶೃಂಗದ ಮುಖ್ಯ ಅತಿಥಿಯಾಗಿ ಮೋದಿ ಆಹ್ವಾನಿತರಾಗಿದ್ದರು. ಇದು ಪ್ರಧಾನಿಯಾಗಿ ಮೋದಿಯವರ 55ನೇ ವಿದೇಶ ಪ್ರವಾಸ ಹಾಗೂ ನಾಲ್ಕನೇ ರಷ್ಯಾ ಭೇಟಿ. ವ್ಲಾಡಿವೊಸ್ಟಕ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮೋದಿ.
ಸಾಮಾನ್ಯವಾಗಿ ಭಾರತದ ಪ್ರಧಾನಿ ರಷ್ಯಾಕ್ಕೆ ಭೇಟಿ ನೀಡಿದರೆ ಕೆಲವು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವುದು, ಉಭಯ ದೇಶಗಳ ಐತಿಹಾಸಿಕ ಸಂಬಂಧವನ್ನು ಮೆಲುಕು ಹಾಕುವುದು, ಪರಸ್ಪರರಿಗೆ ಸಹಕಾರದ ಬದ್ಧತೆಯನ್ನು ಪುನರುಚ್ಚರಿಸುವಂಥ ವಿಧಿಗಳು ನಡೆಯುತ್ತವೆ. ಇಂಥ ಬಹುತೇಕ ಭೇಟಿಗಳಲ್ಲಿ ಮುಖ್ಯವಾಗಿ ಚರ್ಚೆಗೆ ಬರುವುದು ಶಸ್ತ್ರಾಸ್ತ್ರ ಖರೀದಿ ವ್ಯವಹಾರಗಳು. ಹಿಂದಿನಿಂದಲೂ ರಷ್ಯಾ ನಮಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಮುಖ್ಯ ದೇಶ. ಈ ಸಲವೂ ಭೇಟಿಯಲ್ಲಿ ಇದೇ ಅಂಶಗಳಿದ್ದರೂ ‘ವ್ಲಾಡಿವೊಸ್ಟಕ್’ ಅಂಶ ಈ ಭೇಟಿಯನ್ನು ಭಿನ್ನವಾಗುವಂತೆ ಮಾಡಿದೆ.
ವ್ಲಾಡಿವೊಸ್ಟಕ್ ಇರುವುದು ಸೈಬಿರಿಯಾ ದೇಶಕ್ಕೆ ಒತ್ತಿಕೊಂಡಿರುವ ಜಗತ್ತಿನ ಅತಿ ದೊಡ್ಡ ಸಿಹಿನೀರಿನ ಸರೋವರ ಬೈಕಲ್ನ ದಡದಲ್ಲಿ. ರಷ್ಯಾ ಇದನ್ನು ‘ಫಾರ್ ಈಸ್ಟ್ ಪ್ರದೇಶ’ ಎಂದು ಗುರುತಿಸುತ್ತದೆ. ಅತಿ ಚಳಿಯ ಈ ಪ್ರದೇಶ ಸಮೃದ್ಧ ಖನಿಜ ಸಂಪನ್ಮೂಲವನ್ನು ಹೊಂದಿದೆ. ಸೈಬಿರಿಯಾದ ಜತೆಗೆ ಚೀನ, ಮಂಗೋಲಿಯ, ಉತ್ತರ ಕೊರಿಯ ಮತ್ತು ಜಪಾನ್ ಜತೆಗೆ ಇಲ್ಲಿ ರಷ್ಯಾ ಗಡಿ ಹಂಚಿಕೊಂಡಿದೆ. ವ್ಲಾಡಿವೊಸ್ಟಕ್‌ನ ಭೌಗೋಳಿಕ ಮಹತ್ವವನ್ನು ಮನಗಂಡು ಭಾರತ ಇಲ್ಲಿ 1992ರಲ್ಲೇ ದೂತವಾಸವನ್ನು ತೆರೆದಿದೆ. ಈ ಪ್ರದೇಶದಲ್ಲಿ ಸ್ಥಾನೀಯ ದೂತವಾಸವನ್ನು ಹೊಂದಿರುವ ಮೊದಲ ದೇಶ ಎಂಬ ಹಿರಿಮೆಗೂ ಪಾತ್ರವಾಗಿದೆ.
ವ್ಲಾಡಿವೊಸ್ಟಕ್‌ನ ಅಭಿವೃದ್ಧಿಗಾಗಿ ಮೋದಿ ಒಂದು ಶತಕೋಟಿ ಡಾಲರ್ ಸಾಲ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಷ್ಯನ್ ಫಾರ್ ಈಸ್ಟ್ ಮತ್ತು ಚೆನ್ನೈ ನಡುವೆ ಸಮುದ್ರ ಮಾರ್ಗದ ಒಪ್ಪಂದಕ್ಕೆ ಬರಲಾಗಿದೆ. ಈ ಮಾರ್ಗದಿಂದಾಗಿ ವ್ಲಾಡಿವೊಸ್ಟಕ್ ಮತ್ತು ಚೆನ್ನೈ ನಡುವಿನ ಪ್ರಯಾಣ ಅವಧಿ 40 ದಿನಗಳಿಂದ 24 ದಿನಗಳಿಗಿಳಿಯಲಿದೆ. ಕಳೆದ ವರ್ಷ ವಿದೇಶಾಂಗ ಸಚಿವೆ ದಿ. ಸುಷ್ಮಾ ಸ್ವರಾಜ್ ರಷ್ಯಾಕ್ಕೆ ಭೇಟಿ ನೀಡಿದಾಗಲೇ ಈ ಬಗ್ಗೆ ಮಾತುಕತೆ ನಡೆದಿತ್ತು.
ವ್ಲಾಡಿವೊಸ್ಟಕ್ ಸೀಲಿಂಕ್ ಚೀನದ ಮೆರಿಟೈಮ್ ಸಿಲ್ಕ್ರೂಟ್‌ಗೆ ಭಾರತ ನೀಡಿದ ತಿರುಗೇಟು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂತಾರಾಷ್ಟ್ರೀಯವಾಗಿ ಮಹತ್ವ ಹೊಂದಿರುವ ದಕ್ಷಿಣ ಚೀನ ಸಮುದ್ರದ ಪಕ್ಕದಲ್ಲೇ ವ್ಲಾಡಿವೊಸ್ಟಕ್-ಚೆನ್ನೈ ಸೀಲಿಂಕ್ ಹಾದು ಹೋಗಲಿದೆ. ತೈಲ, ನೈಸರ್ಗಿಕ ಅನಿಲ, ಟಿಂಬರ್, ಚಿನ್ನ ಮತ್ತು ವಜ್ರ ವ್ಲಾಡಿವೊಸ್ಟೆಕ್‌ನಲ್ಲಿ ಸಮೃದ್ಧವಾಗಿದೆ. ಇವೆಲ್ಲ ಭಾರತಕ್ಕೆ ಬೇಕು. ಹೊಸ ಸೀಲಿಂಕ್ ಸ್ಥಾಪಿಸುವ ಉದ್ದೇಶ ಇವುಗಳ ವ್ಯಾಪಾರವನ್ನು ಸುಗಮಗೊಳಿಸುವುದು. ಹೀಗೆ ಈ ಭೇಟಿ ಶಸ್ತ್ರಾಸ್ತ್ರ ಖರೀದಿಯಾಚೆಗಿನ ಉದ್ದೇಶವನ್ನು ಹೊಂದಿತ್ತು. ಹಾಗೆಯೇ ದಕ್ಷಿಣ ಚೀನ ಸಮುದ್ರದಲ್ಲಿ ಚೀನಕ್ಕೆ ಸಡ್ಡು ಹೊಡೆಯುವುದು ಈ ಭೇಟಿಯ ರಹಸ್ಯ ಅಜೆಂಡಾ ಆಗಿತ್ತು.
ಬದಲಾದ ಅಂತಾರಾಷ್ಟ್ರೀಯ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲೂ ಈ ಭೇಟಿಗೆ ಮಹತ್ವವಿದೆ. ಕೆಲವು ವರ್ಷಗಳಿಂದೀಚೆಗೆ ಅಮೆರಿಕ ಜತೆಗಿನ ಭಾರತದ ಬಾಂಧವ್ಯ ಗಟ್ಟಿಗೊಳ್ಳುತ್ತಿರುವುದು, ರಷ್ಯಾ ಮತ್ತು ಚೀನದ ಬಾಂಧವ್ಯ ವೃದ್ಧಿ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ಥಾನಕ್ಕೆ ರಷ್ಯಾ ನಿಕಟವಾಗಿರುವುದು ಕಳವಳಕ್ಕೆ ಕಾರಣವಾಗಿತ್ತು. ಹಿಂದಿನಿಂದಲೂ ರಷ್ಯಾ ನಮಗೆ ಸರ್ವಋತು ಮಿತ್ರನಾಗಿದ್ದರೂ ಬದಲಾದ ಆದ್ಯತೆಗಳು ಸಂಬಂಧ ಸಡಿಲಗೊಳ್ಳುವಂತೆ ಮಾಡಿವೆಯೇ ಎಂಬ ಸಣ್ಣ ಅನುಮಾನವೊಂದು ಇತ್ತು. ಭಾರತ ಮತ್ತು ರಷ್ಯಾ ಅಂದು, ಇಂದು, ಎಂದೆಂದೂ ಮಿತ್ರರಾಗಿಯೇ ಮುಂದುವರಿಯಲಿವೆ ಎಂದು ವ್ಲಾದಿಮಿರ್ ಪುಟಿನ್ ಮತ್ತು ಮೋದಿ ಮತ್ತೂಮ್ಮೆ ಸ್ಪಷ್ಟಪಡಿಸುವ ಮೂಲಕ ಈ ಅನುಮಾನವನ್ನು ನಿವಾರಿಸಿದ್ದಾರೆ.
ರಷ್ಯಾದ ಗಾತ್ರ ಕಿರಿದಾಗಿದ್ದರೂ ಈಗಲೂ ಅದು ಬಲಿಷ್ಠ ದೇಶವಾಗಿಯೇ ಉಳಿದಿದೆ. ಅಂತಾರಾಷ್ಟ್ರೀಯ ರಾಜಕೀಯ ಸದಾ ಅನಿಶ್ಚಿತವಾಗಿರುವುದರಿಂದ ಎಲ್ಲ ಕಾಲಕ್ಕೂ ನಂಬಬಹುದಾದ ಇಂಥ ಮಿತ್ರನ ಅಗತ್ಯ ಬಹಳಷ್ಟಿದೆ. ಈ ನೆಲೆಯಲ್ಲಿ ಸಂಬಂಧ ವೃದ್ಧಿಗೆ ಮೋದಿ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ.