ಮುಂಬೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಜಯ ಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲೂ ಭಾರತ ತಂಡ ಮುನ್ನಡೆ ಸಾಧಿಸಿದೆ.
ಗೆಲುವಿಗೆ 145 ರನ್ ಗುರಿ ಪಡೆದಿದ್ದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ನೆರವು ನೀಡಿದರು.
ಈ ಗೆಲುವಿನೊಂದಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನದಲ್ಲಿ ಮತ್ತಷ್ಟು ಬಲಪಡಿಸಿಕೊಂಡಿತು. ಸದ್ಯ 76.92 ಅಂಕ ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡುವುದು ಬಹುತೇಕ ಖಚಿತವಾಗಿದೆ.
ಭಾರತ ಸದ್ಯ 58.93 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂದಿನ ಫೆಬ್ರವರಿ ಮಾರ್ಚ್ ನಲ್ಲಿ ಅಸೀಸ್ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯನ್ನು ತವರಿನಲ್ಲಿ ಆಡಲಿದೆ. ಇದರಲ್ಲಿ ಮೂರನ್ನು ಗೆದ್ದರೆ ಭಾರತ ಫೈನಲ್ ಆಡುವುದು ಖಚಿತವಾಗಲಿದೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಡಿಸೆಂಬರ್ 26 ರಂದು ಸೋಮವಾರ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅವರು ಗೆಲುವಿನ ಶೇಕಡಾವಾರು 54.55 ಅನ್ನು ಹೊಂದಿದ್ದಾರೆ.