ನವದೆಹಲಿ: ಭಾರತದಲ್ಲಿ 24ಗಂಟೆಗಳ ಅವಧಿಯಲ್ಲಿ 13,154 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 961ಕ್ಕೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಡಿಸೆಂಬರ್ 30) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಭರ್ಜರಿ ಬೇಟೆ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಎನ್ ಕೌಂಟರ್ ಗೆ 6 ಜೈಶ್ ಉಗ್ರರು ಬಲಿ
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು(263) ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದೆಹಲಿಯಲ್ಲಿ 252 ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 82,402ಕ್ಕೆ ತಲುಪಿದೆ ಎಂದು ವರದಿ ಹೇಳಿದೆ.
ಮಿಜೋರಾಂನಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 1,41,157ಕ್ಕೆ ಏರಿಕೆಯಾಗಿದ್ದು, ಈವರೆಗೆ 542 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ನಲ್ಲಿ 97, ರಾಜಸ್ಥಾನದಲ್ಲಿ 69, ಕೇರಳದಲ್ಲಿ 65, ತೆಲಂಗಾಣದಲ್ಲಿ 62, ತಮಿಳುನಾಡಿನಲ್ಲಿ 45, ಕರ್ನಾಟಕದಲ್ಲಿ 34, ಆಂಧ್ರಪ್ರದೇಶದಲ್ಲಿ 16 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ವಿವರಿಸಿದೆ.
ವಾಣಿಜ್ಯ ನಗರಿ ಮುಂಬಯಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 7ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ರೆಸ್ಟೋರೆಂಟ್ಸ್, ಹೋಟೆಲ್, ಬಾರ್, ಪಬ್ಸ್, ರೆಸಾರ್ಟ್ ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ.