ನವದೆಹಲಿ: ದೇಶವನ್ನೇ ಕೋವಿಡ್-19 ಅಕ್ಷರಶಃ ನಡುಗಿಸಿದ್ದು ಕಳೆದ 24 ಗಂಟೆಯಲ್ಲಿ ಸರಿಸುಮಾರು 20 ಸಾವಿರ ಜನ ಸೊಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಒಟ್ಟಾರೆ ಸೋಂಕಿತರ ಪ್ರಮಾಣ 5,28,859ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶಗಳ ಪ್ರಕಾರ ಶನಿವಾರ ಮುಂಜಾನೆಯಿಂದ ಭಾನುವಾರ ಮುಂಜಾನೆಯವರೆಗೆ ಸುಮಾರು 19,906 ಜನರಿಗೆ ವೈರಾಣು ಭಾಧಿಸಿದೆ. ಮಾತ್ರವಲ್ಲದೆ ಈ ಅವಧಿಯಲ್ಲಿ 410 ಜನರು ಮೃತಪಟ್ಟಿದ್ದು, ಕೋವಿಡ್ ಗೆ ಒಟ್ಟಾರೆ ಬಲಿಯಾದರ ಸಂಖ್ಯೆ 16,095ಕ್ಕೆ ಏರಿಕೆಯಾಗಿದೆ.
ಒಂದೇ ದಿನ ಮಹಾರಾಷ್ಟ್ರದಲ್ಲಿ 167 ಜನರು ಮೃತಪಟ್ಟಿದ್ದು, ತಮಿಳುನಾಡಿನಲ್ಲಿ 68, ದೆಹಲಿಯಲ್ಲಿ 66, ಉತ್ತರಪ್ರದೇಶದಲ್ಲಿ 19, ಗುಜರಾತ್ ನಲ್ಲಿ 18, ಪಶ್ಚಿಮಬಂಗಾಳದಲ್ಲಿ 13 ಜನರು ಪ್ರಾಣತ್ಯೆಜಿಸಿದ್ದಾರೆ. ಮಾತ್ರವಲ್ಲದೆ ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ, ಹರ್ಯಾಣ, ಪಂಜಾಬ್, ತೆಲಂಗಾಣ, ಮಧ್ಯಪ್ರದೇಶ, ಜಮ್ಮು ಕಾಶ್ಮೀರ, ಬಿಹಾರ, ಒಡಿಶಾ, ಪುದುಚೇರಿಯಲ್ಲಿ ಮೃತರ ಪ್ರಮಾಣ ದ್ವಿಗುಣಗೊಂಡಿದೆ.
ಗಮನಾರ್ಹ ಸಂಗತಿಯೆಂದರೇ ದೇಶದಲ್ಲಿ ಗುಣಮುಖರಾಗುವವರ ಸಂಖ್ಯೆ ಕೂಡ ಹೆಚ್ಚಿದ್ದು (58.56%) ನಿಟ್ಟುಸಿರು ಬಿಡುವಂತಾಗಿದೆ. ಈವರೆಗೂ ಸುಮಾರು 3.09,712 ಜನರು ಸೊಂಕಿನಿಂದ ಮುಕ್ತರಾಗಿದ್ದು, 2,03,051 ಸಕ್ರೀಯ ಪ್ರಕರಣಗಳಿವೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಗುಜರಾತ್ , ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ 8 ರಾಜ್ಯಗಳಲ್ಲೇ ಶೇ 85.5% ರಷ್ಟು ಕೋವಿಡ್ ಸಕ್ರೀಯ ಪ್ರಕರಣಗಳಿದ್ದು, ಇಲ್ಲಿ ಮೃತರ ಪ್ರಮಾಣ ಕೂಡ ಶೇ 87% ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.