ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಕಳೆದ 24ಗಂಟೆಗಳಲ್ಲಿ 4 ಲಕ್ಷಕ್ಕಿಂತ ಕೆಳಕ್ಕೆ ಕುಸಿದಿದ್ದು, ಸಾವಿನ ಸಂಖ್ಯೆ ಕೂಡಾ ಇಳಿಕೆಯಾಗಿರುವುದಾಗಿ ಸೋಮವಾರ(ಮೇ 10) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 19 ಲಸಿಕೆ ನೀತಿ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಬೇಡ; ಸುಪ್ರೀಂಗೆ ಕೇಂದ್ರ
ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ಕಳೆದ 24ಗಂಟೆಗಳಲ್ಲಿ 3,66,161 ಕೋವಿಡ್ 19 ಸೋಂಕು ಪ್ರಕರಣ ಹಾಗೂ 3,754 ಸಾವು ಸಂಭವಿಸಿರುವುದಾಗಿ ತಿಳಿಸಿದೆ. ದೇಶದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 22.66 ಲಕ್ಷಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2,46,116ಕ್ಕೆ ಹೆಚ್ಚಳವಾಗಿದೆ ಎಂದು ವಿವರಿಸಿದೆ.
ಭಾರತದಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 37,45,237ಕ್ಕೆ ಏರಿಕೆಯಾಗಿದ್ದು, ಕೋವಿಡ್ 19 ಸೋಂಕಿತರ ಚೇತರಿಕೆ ಪ್ರಮಾಣ ಶೇ.82.39ರಷ್ಟಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ 1,86,71,222ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ.1.09ರಷ್ಟು ಇದೆ ಎಂದು ಸಚಿವಾಲಯದ ಅಂಕಿಅಂಶ ಹೇಳಿದೆ.