ಬೆರ್ನ್: ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿರುವ ಭಾರತೀಯ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಖಾತೆಗಳ ಬಗ್ಗೆ ವಿಸ್ತೃತ ದಾಖಲೆಗಳ ಮೂರನೇ ಪಟ್ಟಿ ಭಾರತದ ಕೈಗೆ ಸೋಮವಾರ ಸಿಕ್ಕಿದೆ.
ವಾರ್ಷಿಕ ಕ್ರಮದ ಭಾಗವಾಗಿ ಯುರೋಪಿಯನ್ ರಾಷ್ಟ್ರವು 33 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು 96 ದೇಶಗಳೊಂದಿಗೆ ಹಂಚಿಕೊಂಡಿದೆ.
ಸ್ವಿಟ್ಜರ್ಲೆಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ತನ್ನ ಹೇಳಿಕೆಯಲ್ಲಿ, ಈ ವರ್ಷ ಮಾಹಿತಿ ವಿನಿಮಯವು ಇನ್ನೂ 10 ಹೆಚ್ಚುವರಿ ದೇಶಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ. ಈ ಬಾರಿ ಪಾಕಿಸ್ತಾನ ಸೇರಿದಂತೆ ಅಜೈರ್ಬೈಜಾನ್ , ಡೊಮೆನಿಕಾ, ಘಾನಾ, ಲೆಬನಾನ್, ಮಕಾವು, ಕತಾರ್, ಸಮೋವಾ ಮತ್ತು ವೌಟು ದೇಶಗಳೊಂದಿಗೆ ಇದೆ ಮೊದಲ ಬಾರಿಗೆ ಮಾಹಿತಿ ಹಂಚಿಕೊಂಡಿದೆ.
ಪರಸ್ಪರ ಸಂಬಂಧ ಹೊಂದಿರುವ 70 ದೇಶಗಳೊಂದಿಗೆ ಮಾಹಿತಿ ವಿನಿಮಯ ನಡೆಯಿತಾದರೂ, ಸ್ವಿಟ್ಜರ್‌ಲ್ಯಾಂಡ್ 26 ದೇಶಗಳಿಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ.
14 ದೇಶಗಳು ಗೌಪ್ಯತೆ ಮತ್ತು ದತ್ತಾಂಶ ಭದ್ರತೆಗೆ ಅಂತರರಾಷ್ಟ್ರೀಯ ಅವಶ್ಯಕತೆಗಳನ್ನು ಇನ್ನೂ ಪೂರೈಸಿಲ್ಲದ ಕಾರಣ ಮತ್ತು 12 ದೇಶಗಳು ವಿವರಗಳನ್ನು ಸ್ವೀಕರಿಸದಿರಲು ಆಯ್ಕೆ ಮಾಡಿದ್ದರಿಂದ ಮಾಹಿತಿ ನೀಡಿಲ್ಲ .
96 ದೇಶಗಳ ಹೆಸರನ್ನು ಎಫ್‌ಟಿಎ ತಿಳಿಸಿಲ್ಲವಾದರೂ ಭಾರತ ಮೂರನೇ ಬಾರಿಗೆ ಮಾಹಿತಿ ಪಡೆದುಕೊಂಡಿದೆ. ಅಧಿಕಾರಿಗಳು ತಿಳಿಸಿದಂತೆ ಸ್ವಿಸ್ ಹಣಕಾಸು ಸಂಸ್ಥೆಗಳಲ್ಲಿ ಖಾತೆಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರತೀಯರಾಗಿದ್ದಾರೆ.
2022ರಲ್ಲಿ ಮುಂದಿನ ಮಾಹಿತಿ ವಿನಿಮಯವನ್ನು ಮಾಡಿಕೊಳ್ಳಲಾಗುತ್ತದೆ .