Advertisement
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬುಧವಾರ ಸಂಜೆ 6.30ರ ಬಳಿಕ ಬಿರುಗಾಳಿ ಬೀಸಲಾರಂಭಿಸಿತು. ಆರಂಭದಲ್ಲಿ ಅದು ಅಷ್ಟೊಂದು ತೀವ್ರವಾಗಿರಲಿಲ್ಲ. ಸಮಯ ಕಳೆದಂತೆ ಅದು ಬಿರುಸಾಗತೊಡಗಿತು. ಗಾಳಿಯ ಜತೆಗೆ ಕೆಲವು ಸ್ಥಳಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿ ಧಾರಾಕಾರ ಮಳೆಯೂ ಸುರಿದಿದೆ. ಇದರ ಜತೆಗೆ ಆಲಿಕಲ್ಲು ಮಳೆಯೂ ಆಗಿದೆ. ಹೀಗಾಗಿ 10 ಜಿಲ್ಲೆಗಳಲ್ಲಿ ಒಟ್ಟು 64 ಮಂದಿ ಅಸುನೀಗಿದ್ದರೆ, 47 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಅಂದರೆ 36 ಮಂದಿ ಅಸುನೀಗಿ, 35 ಮಂದಿ ಗಾಯಗೊಂಡಿದ್ದಾರೆ. ಇದರ ಜತೆಗೆ ಇತರ 9 ಜಿಲ್ಲೆಗಳಲ್ಲಿ ಕೂಡ ಗಮನಾರ್ಹ ಹಾನಿ ಉಂಟಾಗಿದೆ. ಕರ್ನಾಟಕ ಚುನಾವಣ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಕಾರ್ಯದರ್ಶಿ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಕೂಡ ಬಿರುಗಾಳಿ ಆರ್ಭಟಿಸಿದೆ. ಮನೆಗಳ ಛಾವಣಿ ಹಾರಿಹೋಗಿವೆ. ಹಲವು ಮನೆಗಳು ಕುಸಿದು ಬಿದ್ದಿವೆ.
ರಾಜಸ್ಥಾನ 33 ಮಂದಿ ಸಾವು
ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಬೀಸಿದ ಗಾಳಿಯಿಂದಾಗಿ 33 ಮಂದಿ ಅಸುನೀಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಧೋಲ್ಪುರ, ಭರತ್‌ಪುರ, ಅಲ್ವಾರ್ ಹಾನಿಗೀಡಾದ ಜಿಲ್ಲೆಗಳು. ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ ನೀಡಿದ್ದಾರೆ. ಭರತ್‌ಪುರದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಮತ್ತೂಂದು ಬಿರುಗಾಳಿ?
ಭಾರತೀಯ ಹವಾಮಾನ ಇಲಾಖೆ ಗುರುವಾರ ಹೊರಡಿಸಿರುವ ಮತ್ತೂಂದು ಎಚ್ಚರಿಕೆಯ ಪ್ರಕಾರ, ಮುಂದಿನ 48 ಗಂಟೆಗಳ ಒಳಗಾಗಿ ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಮತ್ತೂಂದು ಧೂಳಿನ ಬಿರುಗಾಳಿ ಬೀಸಲಿದೆ. ಉ.ಪ್ರ., ರಾಜಸ್ಥಾನದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Related Articles
ಪ್ರಧಾನಿ ಸಂತಾಪ
ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಧೂಳಿನ ಬಿರುಗಾಳಿಯಿಂದ 109 ಮಂದಿ ಅಸುನೀಗಿದ ಬಗ್ಗೆ ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಧೂಳಿನ ಬಿರುಗಾಳಿಯಿಂದ ಸಾವು ನೋಟು ಉಂಟಾದ ಬಗ್ಗೆ ದುಃಖವಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ. ಅಗಲಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
Advertisement
ಕಾರಣವೇನು?– ಅತ್ಯಂತ ಹೆಚ್ಚಿನ ಪ್ರಮಾಣದ ತಾಪಮಾನ ಹಾಗೂ ಪಶ್ಚಿಮ ಭಾಗದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಉಂಟಾದ ಬಿರುಗಾಳಿ, ತೇವಾಂಶ ಧೂಳಿನ ಬಿರುಗಾಳಿಗೆ ಕಾರಣವಾಗಿದೆ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಕುಲದೀಪ್ ಶ್ರೀವಾಸ್ತವ – ರಾಜಸ್ಥಾನದ ಕೆಲ ಭಾಗಗಳಲ್ಲಿನ ಗರಿಷ್ಠ ಉಷ್ಣತೆ 45 ಡಿಗ್ರಿ ಸೆಲ್ಷಿಯಸ್ ವರೆಗೆ ತಲುಪಿತ್ತು. ಹೀಗಾಗಿ ಅಲ್ಲಿನ ಉತ್ತರ ಭಾಗದಲ್ಲಿ ಒಂದು ರೀತಿಯ ಒತ್ತಡದ ವಾತಾವರಣ ಕಂಡುಬಂದಿತ್ತು. – ಹೆಚ್ಚಿನ ಪ್ರಮಾಣದ ತಾಪಮಾನ ತೇವಾಂಶ ಹೆಚ್ಚಾಗುವಂತೆ ಮಾಡುತ್ತದೆ. ಇದರ ಜತೆಗೆ ಮೋಡಗಳಿಂದಾಗಿ ಧಾರಾಕಾರ ಮಳೆ ಮತ್ತು ಬಿರುಗಾಳಿ ಉಂಟಾಗುತ್ತವೆ. – ಏಕಾಏಕಿ ಈ ರೀತಿ ಉಂಟಾಗುತ್ತದೆ ಎನ್ನುತ್ತಾರೆ ಸ್ಕೈಮೆಟ್ ಹವಾಮಾನ ಸಂಸ್ಥೆಯ ಮುಖ್ಯ ಹವಾಮಾನ ತಜ್ಞ ಮಹೇಶ್ ಪಲಾವಟ್.