ಬೆಂಗಳೂರು: ಪ್ರಜ್ಞೇಶ್ ಗುಣೇಶ್ವರನ್ “ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್’ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶನಿವಾರ ಉದ್ಯಾನನಗರಿಯ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಭಾರತದವರೇ ಆದ ಸಾಕೇತ್ ಮೈನೇನಿ ಅವರನ್ನು 6-2, 6-2 ಅಂತರದಿಂದ ಸೋಲಿಸಿದರು. ಈ ಸಾಧನೆಗಾಗಿ ಪ್ರಜ್ಞೇಶ್ 1.07 ಕೋಟಿ ರೂ. ನಗದು ಬಹುಮಾನ ಪಡೆದರು. ಜತೆಗೆ 125 ಎಟಿಪಿ ಅಂಕಗಳನ್ನು ಪಡೆದುಕೊಂಡರು.
ಕೂಟದುದ್ದಕ್ಕೂ ಸಾಕೇತ್ ಮೈನೇನಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಸಾಕೇತ್ ಫೈನಲ್‌ನಲ್ಲಿ ಭಾರೀ ಹೋರಾಟ ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ ಎದುರಾಳಿಗೆ ಸ್ವಲ್ಪವೂ ಚೇತರಿಸಿಕೊಳ್ಳಲು ಅವಕಾಶ ನೀಡದ ಪ್ರಜ್ಞೇಶ್ ಪ್ರಶಸ್ತಿ ಎತ್ತಿದರು.
“ಕಠಿನ ಶ್ರಮ ವಹಿಸಿದ್ದೆ. ಅದಕ್ಕೆ ತಕ್ಕ ಫಲ ಸಕ್ಕಿದೆ. ಕೂಟದುದ್ದಕ್ಕೂ ನನ್ನೆಲ್ಲ ಯೋಜನೆಗಳೂ ಕೈಗೂಡಿದವು. ಇನ್ನು ಮುಂದಿನ ಕೂಟಗಳತ್ತ ಗಮನ ನೀಡಬೇಕಿದೆ’
– ಪ್ರಜ್ಞೇಶ್ ಗುಣೇಶ್ವರನ್