Advertisement

ಜಾಗತಿಕ ಮಾರುಕಟ್ಟೆಗಾಗಿ ಭಾರತದಲ್ಲೇ ತಯಾರಾಗಲಿದೆ ಮರುಬಳಕೆಯ ರಾಕೆಟ್‌

11:30 AM Sep 07, 2022 | Team Udayavani |

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸೃಷ್ಟಿಸುತ್ತಿರುವ ಇಸ್ರೋ ಈಗ ಜಾಗತಿಕ ಮಾರುಕಟ್ಟೆಗಾಗಿಯೇ ಹೊಸ ಮರುಬಳಕೆಯ ರಾಕೆಟ್‌ಗಳ ವಿನ್ಯಾಸ ಮತ್ತು ನಿರ್ಮಾಣದತ್ತ ಮುಖಮಾಡಿದೆ. ಇದರಿಂದ ಉಪಗ್ರಹಗಳ ಉಡಾವಣೆಯ ವೆಚ್ಚವೂ ಗಣನೀಯವಾಗಿ ತಗ್ಗಲಿದೆ.

Advertisement

ಈ ಕುರಿತು ಮಾತನಾಡಿರುವ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಮತ್ತು ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌, “ಪ್ರಸ್ತುತ 1ಕೆಜಿ ಪೇಲೋಡ್‌ ಅನ್ನು ಕಕ್ಷೆಗೆ ಸೇರಿಸಲು ಸುಮಾರು 10 ಸಾವಿರದಿಂದ 15 ಸಾವಿರ ಅಮೆರಿಕನ್‌ ಡಾಲರ್‌ನಷ್ಟು ವೆಚ್ಚವಾಗುತ್ತದೆ. ಇದನ್ನು ನಾವು ಕೆ.ಜಿ.ಗೆ 5 ಸಾವಿರ ಅಥವಾ 1 ಸಾವಿರ ಡಾಲರ್‌ಗೆ ಇಳಿಸಬೇಕೆಂದು ಬಯಸುತ್ತೇವೆ. ಇದನ್ನು ಸಾಧ್ಯವಾಗಿಸಲು ಇರುವ ಏಕೈಕ ವಿಧಾನವೆಂದರೆ ರಾಕೆಟ್‌ಗಳ ಮರುಬಳಕೆ. ಹೀಗಾಗಿ, ನಾವು ಮುಂದೆ ನಿರ್ಮಿಸಲಿರುವ ಜಿಎಸ್‌ಎಲ್‌ವಿ ಎಂಕೆ 3 ರಾಕೆಟ್‌ ಅನ್ನು ಮರುಬಳಕೆಗೆ ಯೋಗ್ಯವನ್ನಾಗಿ ಮಾಡಲು ಪ್ರಯತ್ನಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಕೈಗಾರಿಕೆಗಳು, ಸ್ಟಾರ್ಟಪ್‌ಗಳು ಮತ್ತು ಇಸ್ರೋದ ವಾಣಿಜ್ಯ ಅಂಗ ನ್ಯೂಸ್ಪೇಸ್‌ ಇಂಡಿಯಾ ಲಿ.(ಎನ್‌ಎಸ್‌ಐಎಲ್‌) ಸಹಭಾಗಿತ್ವದಡಿ ಮರುಬಳಕೆ ಮಾಡಬಲ್ಲ ರಾಕೆಟ್‌ಗಳನ್ನು ಇಸ್ರೋ ನಿರ್ಮಿಸಲಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಪ್ರಸ್ತಾಪಕ್ಕೆ ಒಂದು ಹೊಸ ರೂಪ ಬರಲಿದೆ. ಕಡಿಮೆ ವೆಚ್ಚದ, ಉತ್ಪಾದನಾ ಸ್ನೇಹಿ, ಸ್ಪರ್ಧಾತ್ಮಕ ರಾಕೆಟ್‌ಗಳನ್ನು ಭಾರತದ ನೆಲದಲ್ಲೇ ತಯಾರಿಸಿ, ಬಾಹ್ಯಾಕಾಶ ವಲಯದ ಸೇವೆಗಾಗಿ ಜಾಗತಿಕವಾಗಿ ಲಭ್ಯವಾಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದೂ ಸೋಮನಾಥ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next