Advertisement
ಕೊನೆಯ ಜನಗಣತಿ 2011-12ರಲ್ಲಿ ನಡೆದಿದ್ದು ನಿಗದಿಯಂತೆ 10 ವರ್ಷಗಳ ತರುವಾಯ 2021- 22ರಲ್ಲಿ ಜನಗಣತಿ ಪ್ರಕ್ರಿಯೆ ಪೂರ್ಣಗೊಂಡು ವರದಿ ಬಿಡುಗಡೆ ಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಕೊರೊನಾ ಮಹಾಮಾರಿ ದೇಶಾದ್ಯಂತ ಇನ್ನಿಲ್ಲದಂತೆ ಬಾಧಿಸಿದ ಪರಿಣಾಮ ಸರಕಾರ ಅನಿವಾರ್ಯವಾಗಿ ಜನಗಣತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿತ್ತು. ಆದರೆ ಆ ಬಳಿಕದ ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆ, ತಾಂತ್ರಿಕ ಮತ್ತು ಕಾನೂನಿನ ಅಡೆತಡೆಗಳು ಹಾಗೂ ಪ್ರಸಕ್ತ ವರ್ಷದ ಬೇಸಗೆಯಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಿದ್ದರಿಂದ ಜನಗಣತಿ ಪ್ರಕ್ರಿಯೆ ಅಕ್ಷರಶಃ ನನೆಗುದಿಗೆ ಬಿದ್ದಿತ್ತು. ಕೊನೆಗೂ ಈಗ ಜನಗಣತಿಗೆ ಮುಹೂರ್ತ ಕಂಡುಬಂದಂತೆ ಗೋಚರಿಸುತ್ತಿದೆ.
Related Articles
Advertisement
ತಜ್ಞರ ಈ ಆಕ್ಷೇಪ, ಅಸಮಾಧಾನ ಎಲ್ಲವೂ ವಾಸ್ತವವೇ. ಸಮರ್ಪಕ ಮತ್ತು ನೈಜ ದತ್ತಾಂಶಗಳಿಲ್ಲದೆ ಸರಕಾರ ತನ್ನ ಧೋರಣಾತ್ಮಕ ನಿರ್ಧಾರಗಳು, ಜನಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಅವುಗಳ ಪ್ರಯೋಜನ ನೈಜ ಫಲಾನುಭವಿಗಳಿಗೆ ಲಭಿಸದೆ ಅನ್ಯರ ಪಾಲಾಗುತ್ತದೆ. ಕಳೆದ 13 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಏಳುಬೀಳುಗಳಾಗಿದ್ದು, ಇವೆಲ್ಲವನ್ನು ಪರಿಗಣಿಸದೆ ಯಾವುದೋ ಹಳೆಯ ಅಥವಾ ಊಹನಾತ್ಮಕ ಅಂಕಿಅಂಶಗಳನ್ನು ಮುಂದಿಟ್ಟು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದರೆ ಅದರ ನೈಜ ಉದ್ದೇಶ ಈಡೇರುವುದು ಕಷ್ಟಸಾಧ್ಯ.
ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳ ಫಲ ದೇಶದ ತಳಹಂತದ ಜನವರ್ಗಕ್ಕೆ ತಲುಪಿದಾಗ ಮಾತ್ರ ಅವು ಯಶಸ್ಸು ಕಾಣಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಜನಗಣತಿ ಪ್ರಕ್ರಿಯೆ ಕೇವಲ ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವುದಕ್ಕಷ್ಟೇ ಸೀಮಿತವಾಗದೆ ಜನತೆಯ ಸಮಗ್ರ ಜೀವನದ ಸ್ಥಿತಿಗತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದನ್ನು ಅಧರಿಸಿ ಸರಕಾರ ತನ್ನ ಭಾವೀ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಸಾಮಾಜಿಕ ನ್ಯಾಯದಡಿ ದೇಶವನ್ನು ಮುನ್ನಡೆಸಲು ಸಾಧ್ಯ. ಇನ್ನಾದರೂ ಕೇಂದ್ರ ಸರಕಾರ ಕಾಲಹರಣ ಮಾಡದೆ ಜನಗಣತಿ ಪ್ರಕ್ರಿಯೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ವರದಿಯನ್ನು ಬಿಡುಗಡೆಗೊಳಿಸಲು ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ತೋರಬೇಕು.