ಪ್ರಾವಿಡೆನ್ಸ್: ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ರಾತ್ರಿ ನಡೆದ ಭಾರತ-ಪಾಕಿಸ್ತಾನದ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ವಿಶೇಷವೊಂದು ನಡೆದಿದ್ದು ಯಾರ ಗಮನಕ್ಕೂ ಬರದೇ ಹೋಯಿತು.
ಪಂದ್ಯದಲ್ಲಿ ಭಾರತ ಸುಲಭವಾಗಿ ಗೆದ್ದಿದ್ದರೂ ಈ ಗೆಲುವಿನಲ್ಲಿ ಭಾರತಕ್ಕೆ 10 ರನ್‌ಗಳ ಉಚಿತ ಕೊಡುಗೆಯೂ ಇತ್ತು!
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡದ ಬ್ಯಾಟ್ಸ್‌ಮನ್‌ಗಳು ಅಂಕಣದ ಮೇಲೆ ಓಡಿದ್ದರಿಂದ ಅಂಪೈರ್‌ಗಳು ಆ ತಂಡಕ್ಕೆ 10 ರನ್ ದಂಡ ವಿಧಿಸಿದರು. ಆದ್ದರಿಂದ ಭಾರತ ಬ್ಯಾಟಿಂಗ್ ಆರಂಭಿಸುವ ಮೊದಲೇ ಸ್ಕೋರ್‌ಬೋರ್ಡ್‌ನಲ್ಲಿ 10/0 ರನ್ ಎಂದು ಕಂಡು ಬಂದು ಹಲವರು ಗೊಂದಲಕ್ಕೊಳಗಾಗಿದ್ದರು.
ಪಾಕಿಸ್ತಾನ ಬ್ಯಾಟಿಂಗ್ ಮಾಡುವಾಗ ಮೇಲೆ ಓಡಬೇಡಿ ಎಂದು ಅಂಪೈರ್‌ಗಳು ಒಮ್ಮೆ ಬ್ಯಾಟ್ಸ್ಮನ್‌ಗಳಿಗೆ ಸೂಚಿಸಿದ್ದರು. ಈ ಎಚ್ಚರಿಕೆಯನ್ನು 13ನೇ ಓವರ್‌ನಲ್ಲಿ ನೀಡಲಾಗಿತ್ತು. ಅದಾದ ಮೇಲೂ ಪಾಕ್ ಬ್ಯಾಟ್ಸ್‌ವುಮನ್‌ಗಳು 2 ಬಾರಿ ಅದನ್ನೇ ಪುನರಾವರ್ತಿಸಿದರು. ಇದರ ಪರಿಣಾಮ 18ನೇ ಓವರ್‌ನ ಮೊದಲ ಎಸೆತದಲ್ಲಿ ಮತ್ತು 20ನೇ ಓವರ್‌ನ ಕೊನೆಯ ಎಸೆತದಲ್ಲಿ ತಲಾ 5 ರನ್ ದಂಡ ಹೇರಲಾಯಿತು. ಈ ದಂಡ ಭಾರತಕ್ಕೆ ಕೊಡುಗೆಯಾಗಿ ಲಭಿಸಿತು. ಭಾರತ ವಾಸ್ತವವಾಗಿ ಗೆಲುವಿಗೆ 134 ರನ್ ಗಳಿಸಬೇಕಾಗಿದ್ದರೂ 10 ರನ್ ಮೊದಲೇ ಸಿಕ್ಕಿದ್ದರಿಂದ 124 ರನ್ ಮಾತ್ರ ಗಳಿಸುವ ಗುರಿ ಹೊಂದಿತ್ತು.