ಇಸ್ಲಾಮಾಬಾದ್ : ”ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವ ಭಾರತ ಮತ್ತು ಪಾಕಿಸ್ಥಾನ ಎಂದೂ ಯುದ್ಧವನ್ನು ಮಾಡಲಾರವು; ಯುದ್ಧದ ಬಗ್ಗೆ ಯೋಚಿಸುವುದು ಕೂಡ ಮೂರ್ಖತನವಾದೀತು” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ಥಾನದ ಕಡೆಯಿಂದ “ಕರ್ತಾರ್‌ಪುರ್ ಕಾರಿಡಾರ್’ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು ತಮ್ಮ ಮಾತುಗಳಲ್ಲಿ ಕ್ರಿಕೆಟ್ ಸೂಕ್ಷತೆಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಧಾರಾಳವಾಗಿ ಉಲ್ಲೇಖೀಸಿ ಭಾರತ – ಪಾಕಿಸ್ಥಾನ ಸಂಬಂಧ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದರು .
”ಕ್ರಿಕೆಟ್ ನಲ್ಲಿ ಯಾರು ಅಪಾಯಗಳನ್ನು ಲೆಕ್ಕಿಸದೆ, ಸಂಪ್ರದಾಯಗಳನ್ನು ಮುರಿಯುತ್ತಾರೋ ಅವರಿಗೆ ಹೆಚ್ಚಿನ ಯಶಸ್ಸು ಪ್ರಾಪ್ತವಾಗುತ್ತದೆ” ಎಂದ ಇಮ್ರಾನ್, ಭಾರತ ಮತ್ತು ಪಾಕಿಸ್ಥಾನ ತಮ್ಮ ಸಾಂಪ್ರದಾಯಿಕ ವೈರತ್ವವನ್ನು ಕೈಬಿಟ್ಟು ಉತ್ತಮ ನೆರೆಕರೆಯ ದೇಶಗಳಾಗುವ ಅಗತ್ಯವಿದೆ ಎಂದು ಹೇಳಿದರು.
“ಎಪ್ಪತ್ತು ವರ್ಷಗಳ ಹಿಂದೆ ಇದ್ದ ಸನ್ನಿವೇಶದಲ್ಲೇ ಇಂದು ಭಾರತ ಮತ್ತು ಪಾಕಿಸ್ಥಾನ ನಿಂತಿರುವುದನ್ನು ನಾವು ಕಾಣಬಹುದಾಗಿದೆ. ನಾವು ಪರಸ್ಪರರನ್ನು ದೂರುವುದನ್ನು ನಿಲ್ಲಿಸಿ ಮುಂದಕ್ಕೆ ಸಾಗಬೇಕಾಗಿದೆ; ಎರಡೂ ಕಡೆಗಳಿಂದ ತಪ್ಪಾಗಿದೆ; ಆದರೆ ನಾವು ಭೂತಕಾಲದಲ್ಲಿ ಬದುಕಬಾರದು. ಇತಿಹಾಸದಿಂದ ನಾವು ಪಾಠ ಕಲಿಯಬೇಕು” ಎಂದು ಇಮ್ರಾನ್ ಹೇಳಿದರು.
ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ಆಲಂಗಿಸಿಕೊಂಡು ಭಾರತದಲ್ಲಿ ವ್ಯಾಪಕ ಟೀಕೆ, ಖಂಡನೆಗಳಿಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ, ಹಾಲಿ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರನ್ನು ಸಮರ್ಥಿಸಲು ಇಮ್ರಾನ್ ಯತ್ನಿಸಿದರು.