ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ಥಾನ ಪ್ರೇರಿತ ಉಗ್ರರು ಮುಗ್ಧ ನಾಗರಿಕರ ಹತ್ಯೆಯಲ್ಲಿ ತೊಡಗಿರುವುದರಿಂದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕು, ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ಥಾನ ವಿರುದ್ಧ ಆಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ಪಂದ್ಯ ರದ್ದಾಗದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.
ಇದು ಐಸಿಸಿ ಸಂಘಟಿಸುವ ಕೂಟವಾದ್ದರಿಂದ ಪ್ರತಿಯೊಂದು ತಂಡವೂ ನಿರ್ದಿಷ್ಟ ಎದುರಾಳಿ ವಿರುದ್ಧ ಆಡಲೇಬೇಕಾಗುತ್ತದೆ. ಇದನ್ನು ನಿರಾಕರಿಸುವಂತಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
“ಕಾಶ್ಮೀರದಲ್ಲಿ ನಡೆಯುತ್ತಿರುವ ಮುಗ್ಧ ನಾಗರಿಕರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಭಯೋತ್ಪಾದಕ ಸಂಘಟನೆಯ ವಿರುದ್ಧ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಆದರೆ ಇದು ಐಸಿಸಿ ಆಯೋಜಿತ ಟೂರ್ನಿಯಾದ್ದರಿಂದ ಯಾವುದೇ ಪಂದ್ಯವನ್ನು ಆಡದೇ ಇರುವಂತಿಲ್ಲ. ಆ ಪ್ರಕಾರ ಭಾರತ- ಪಾಕಿಸ್ಥಾನ ನಡುವಿನ ಪಂದ್ಯ ನಿಗದಿ ಯಂತೆ ನಡೆಯಲಿದೆ’ ಎಂದು ರಾಜೀವ್ ಶುಕ್ಲಾ ಹೇಳಿದರು.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಆರನೇ ಮುಖಾಮುಖಿ
ಭಾರತ-ಪಾಕಿಸ್ಥಾನ ನಡುವಿನ ಲೀಗ್ ಪಂದ್ಯ ರವಿವಾರ ರಾತ್ರಿ “ದುಬಾೖ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಭಾರತ-ಪಾಕಿಸ್ಥಾನ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿ ಆಗುತ್ತಿರುವ 6ನೇ ನಿದರ್ಶನ ಇದಾಗಿದೆ. ಹಿಂದಿನ ಐದೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ಥಾನವನ್ನು ಮಣ್ಣು ಮುಕ್ಕಿಸಿತ್ತು.