Advertisement
ಇಲ್ಲಿನ ಮೊದಲ ಫಲಾನುಭವಿಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಈ ಎರಡು ದೇಶಗಳು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವುದು ದೂರದ ಮಾತೇ ಆಗಿದ್ದರೂ ಕೂಟ ಮಾತ್ರ ಅತ್ಯಂತ ಯಶಸ್ವಿಯಾಗಿ ನಡೆದದ್ದು ಸುಳ್ಳಲ್ಲ.
1987ರ ಈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಾಯೋಜಿಸಿದ್ದು ರಿಲಯನ್ಸ್ ಕಂಪೆನಿ. ಇಂಗ್ಲೆಂಡ್‌ನಲ್ಲಿ ನಡೆದದ್ದು 60 ಓವರ್‌ಗಳ ಪಂದ್ಯವಾದರೆ, ಏಷ್ಯಾಕ್ಕೆ ಬರುವಾಗ ಇದು 50 ಓವರ್‌ಗಳಿಗೆ ಇಳಿದಿತ್ತು. ಅದೇ 8 ತಂಡಗಳ, 2 ಗ್ರೂಪ್‌ಗ್ಳ, 2 ಸುತ್ತಿನ ಮುಖಾಮುಖೀ ಇದಾಗಿತ್ತು. ಟೆಸ್ಟ್ ಮಾನ್ಯತೆ ಪಡೆದಿದ್ದ ಎಲ್ಲ 7 ರಾಷ್ಟ್ರಗಳು ನೇರ ಪ್ರವೇಶ ಪಡೆದ್ದಿವು. ಜಿಂಬಾಬ್ವೆ ಐಸಿಸಿ ಟ್ರೋಫಿ ಗೆದ್ದು ಸತತ 2ನೇ ವಿಶ್ವಕಪ್ ಆಡುವ ಅವಕಾಶ ಪಡೆಯಿತು. ಫೈನಲ್‌ನಲ್ಲಿ ಅದು ನೆದರ್ಲೆಂಡ್ಸ್‌ಗೆ ಸೋಲುಣಿಸಿತ್ತು. ಭಾರತ ಹಾಲಿ ಚಾಂಪಿಯನ್ ಆಗಿದ್ದರಿಂದ ಸಹಜವಾಗಿಯೇ ನೆಚ್ಚಿನ ತಂಡವಾಗಿತ್ತು. ಗಡಿಯಾಚೆ ಪಾಕಿಸ್ಥಾನ ಫೇವರಿಟ್ ಎನಿಸಿತ್ತು. ಒಂದು ಸೆಮಿಫೈನಲ್ ಭಾರತಕ್ಕೆ (ಮುಂಬಯಿ), ಇನ್ನೊಂದು ಸೆಮಿಫೈನಲ್ ಪಾಕಿಸ್ಥಾನಕ್ಕೆ (ಲಾಹೋರ್) ಮೀಸಲಾಯಿತು. ಫೈನಲ್ ಆತಿಥ್ಯ ಕೋಲ್ಕತಾದ ಈಡನ್ ಗಾರ್ಡನ್ಸ್ ಪಾಲಾಯಿತು.
Related Articles
1983ರಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ಕಪಿಲ್‌ದೇವ್ ಅವರೇ ತಂಡದ ಸಾರಥಿಯಾಗಿದ್ದರು. ಕಪಿಲ್ ಸೇರಿ ಚಾಂಪಿಯನ್ ತಂಡದ 6 ಮಂದಿ ಆಟಗಾರರಿದ್ದರು. “ಎ’ ವಿಭಾಗದಿಂದ ಭಾರತ, ಆಸ್ಟ್ರೇಲಿಯ; “ಬಿ’ ವಿಭಾಗದಿಂದ ಪಾಕಿಸ್ಥಾನ-ಇಂಗ್ಲೆಂಡ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು. ಪಾಕಿಸ್ಥಾನಕ್ಕೆ ಲಾಹೋರ್‌ನಲ್ಲಿ, ಭಾರತಕ್ಕೆ ಮುಂಬಯಿಯಲ್ಲಿ ಉಪಾಂತ್ಯ ಪಂದ್ಯ ಆಡುವ ಅವಕಾಶ ಲಭಿಸಿದ್ದರಿಂದ ಆಗಲೇ ಇತ್ತಂಡಗಳ ನಡುವೆ ಫೈನಲ್ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಸಂಭವಿಸಿದ್ದೇ ಬೇರೆ.
Advertisement
ಲಾಹೋರ್‌ನಲ್ಲಿ ನಡೆದ ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 18 ರನ್ನುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು. ಮರುದಿನ ಭಾರತ 35 ರನ್ನುಗಳಿಂದ ಇಂಗ್ಲೆಂಡ್‌ಗೆ ತಲೆಬಾಗಿತು. ಅಲ್ಲಿಗೆ ಎರಡೂ ಆತಿಥೇಯ ರಾಷ್ಟ್ರಗಳ ಕತೆ ಮುಗಿಯಿತು. ಭಾರತ ಮಾಜಿ ಆಯಿತು!
ಇಂಗ್ಲೆಂಡ್-ಆಸ್ಟ್ರೇಲಿಯ ಫೈನಲ್ಕೋಲ್ಕತಾ ಫೈನಲ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಎದುರಾದವು. ಇತ್ತಂಡಗಳಿಗೂ ಇದು 2ನೇ ಫೈನಲ್ ಆಗಿತ್ತು. ಮೊದಲ ಫೈನಲ್‌ನಲ್ಲಿ ಎರಡೂ ತಂಡಗಳು ಎಡವಿದ್ದವು. ಹೀಗಾಗಿ ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗುತ್ತಿತ್ತು. ಈ ಅವಕಾಶ ಎರಡೂ ತಂಡಗಳಿಗಿತ್ತು. ಆದರೆ ಇಂಗ್ಲೆಂಡ್ ಇದನ್ನು ಕೈಯಾರೆ ಕಳೆದುಕೊಂಡಿತು. 7 ರನ್ನುಗಳಿಂದ ಗೆದ್ದ ಆಸ್ಟ್ರೇಲಿಯ ಕಿರೀಟ ಏರಿಸಿಕೊಂಡಿತು. ಅಲನ್ ಬೋರ್ಡರ್ ನೇತೃತ್ವದ ಆಸ್ಟ್ರೇಲಿಯ ಗಳಿಸಿದ್ದು 5ಕ್ಕೆ 253 ರನ್. ಇಂಗ್ಲೆಂಡ್ 8ಕ್ಕೆ 246 ರನ್ ಗಳಿಸಿ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ಅನಗತ್ಯ ರಿವರ್ಸ್ ಸ್ವೀಪ್‌ಗೆ ಮುಂದಾಗಿ ವಿಕೆಟ್ ಕೈಚೆಲ್ಲಿದ ಆಂಗ್ಲರ ನಾಯಕ ಮೈಕ್ ಗ್ಯಾಟಿಂಗ್ ವಿಲನ್ ಎನಿಸಿಕೊಂಡರು. ಇಲ್ಲವಾದರೆ, ಬಹುಶಃ ಇಂಗ್ಲೆಂಡ್ ಮೊದಲ ವಿಶ್ವಕಪ್ ಎತ್ತಲು 2019ರ ತನಕ ಕಾಯಬೇಕಾದ ಸ್ಥಿತಿ ಎದುರಾಗುತ್ತಿರಲಿಲ್ಲವೋ ಏನೋ!