Advertisement

ಚಂಡಿಮಾಲ್‌, ಮ್ಯಾಥ್ಯೂಸ್‌ ಶತಕದಾಟ; ಲಂಕಾ ಹೋರಾಟ

06:40 AM Dec 05, 2017 | Team Udayavani |

ಹೊಸದಿಲ್ಲಿ: ಕೋಟ್ಲಾದ ಫ್ಲ್ಯಾಟ್‌ ಟ್ರ್ಯಾಕ್‌ ಮೇಲೆ ಶ್ರೀಲಂಕಾ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ನಾಯಕ ದಿನೇಶ್‌ ಚಂಡಿಮಾಲ್‌ ಮತ್ತು ಏಂಜೆಲೊ ಮ್ಯಾಥ್ಯೂಸ್‌ ಬಾರಿಸಿದ ಜವಾಬ್ದಾರಿಯುತ ಶತಕ ಸಾಹಸದಿಂದ ಸೋಮವಾರದ ಆಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 356 ರನ್‌ ಮಾಡಿದೆ.

Advertisement

ಶ್ರೀಲಂಕಾ ಫಾಲೋಆನ್‌ನಿಂದೇನೋ ಪಾರಾಗಿದೆ. ಆದರೆ ತಂಡಕ್ಕೆ ಭಾರೀ ಮೊತ್ತದ ಹಿನ್ನಡೆ ತಪ್ಪಿದ್ದಲ್ಲ. ಶ್ರೀಲಂಕಾ ಈಗಾಗಲೇ 180 ರನ್‌ ಹಿಂದಿದೆ. ಮಂಗಳವಾರ ಉಳಿದೊಂದು ವಿಕೆಟನ್ನು ಬೇಗ ಉದುರಿಸಿ ಭಾರೀ ಮೊತ್ತದ ಟಾರ್ಗೆಟ್‌ ನೀಡುವುದು ಭಾರತದ ಗುರಿ. ಇನ್ನೂ 2 ದಿನಗಳ ಆಟ ಬಾಕಿ ಇರುವುದರಿಂದ ಕೋಟ್ಲಾ ಪಂದ್ಯವನ್ನು ಗೆಲ್ಲುವ ಎಲ್ಲ ಅವಕಾಶಗಳೂ ಟೀಮ್‌ ಇಂಡಿಯಾದ ಮುಂದೆ ತೆರೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

3ಕ್ಕೆ 131 ರನ್‌ ಮಾಡಿದಲ್ಲಿಂದ ಶ್ರೀಲಂಕಾ 3ನೇ ದಿನದಾಟ ಮುಂದುವರಿಸಿತ್ತು. ಮ್ಯಾಥ್ಯೂಸ್‌ 57 ರನ್‌ ಹಾಗೂ ಚಂಡಿಮಾಲ್‌ 25 ರನ್ನಿನಿಂದ ಬ್ಯಾಟಿಂಗ್‌ ಮುಂದುವರಿಸಿದರು. ನಾಯಕ ಚಂಡಿಮಾಲ್‌ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡಿದ್ದು, 147ರಲ್ಲಿ ಅಜೇಯರಾಗಿ ಉಳಿದಿದ್ದಾರೆ. ಮ್ಯಾಥ್ಯೂಸ್‌ 111 ರನ್ನುಗಳ ಅಮೂಲ್ಯ ಕೊಡುಗೆ ಸಲ್ಲಿಸಿದ್ದಾರೆ. ಇವರಿಬ್ಬರಿಂದ 4ನೇ ವಿಕೆಟಿಗೆ 79.2 ಓವರ್‌ಗಳಿಂದ 181 ರನ್‌ ಒಟ್ಟುಗೂಡಿತು. ಚಹಾ ವಿರಾಮಕ್ಕೂ ಸ್ವಲ್ಪ ಮೊದಲು ಈ ಜೋಡಿ ಬೇರ್ಪಟ್ಟಿತು. ಅನಂತರ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಭಾರತ ಪಟಪಟನೆ ವಿಕೆಟ್‌ಗಳನ್ನು ಉರುಳಿಸುತ್ತ ಹೋಯಿತು. ಕೇವಲ 100 ರನ್‌ ಅಂತರದಲ್ಲಿ ಲಂಕೆಯ 6 ವಿಕೆಟ್‌ ಹಾರಿಸಿದ್ದು ಆತಿಥೇಯರ ಬೌಲಿಂಗ್‌ ಪರಾಕ್ರಮಕ್ಕೆ ಸಾಕ್ಷಿ.

ಆದರೆ ಕೊಹ್ಲಿ ಪಡೆಯ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. 3ನೇ ದಿನವೊಂದರಲ್ಲೇ ಸುಮಾರು 5 ಕ್ಯಾಚ್‌ಗಳನ್ನು ಭಾರತದ ಫೀಲ್ಡರ್‌ಗಳು ನೆಲಕ್ಕೆ ಹಾಕಿದರು. ಹೆಚ್ಚಿನ ಕ್ಯಾಚ್‌ಗಳು ಸ್ಲಿಪ್‌ ವಿಭಾಗದಲ್ಲಿ ಕೈಜಾರಿದವು.

ಶ್ರೀಲಂಕಾ ಇತ್ತೀಚಿನ ತಿಂಗಳಲ್ಲಿ ಭಾರತದೆದುರು ತೋರ್ಪಡಿಸಿದ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ಇದಾಗಿದೆ. ಬಹಳ ಸಮಯದ ಬಳಿಕ ತಂಡದ ಅನುಭವಿ ಬ್ಯಾಟ್ಸ್‌ಮನ್‌ಗಳಿಬ್ಬರು ಸುದೀರ್ಘ‌ ಅವಧಿಯ ಬ್ಯಾಟಿಂಗ್‌ ನಡೆಸಿ ಗಮನ ಸೆಳೆದರು. ಒಟ್ಟು 25 ದಿನಗಳ ಕಾಲ ಸಾಗಬೇಕಿದ್ದ ಭಾರತದೆದುರಿನ ಹಿಂದಿನ 5 ಟೆಸ್ಟ್‌ಗಳು 16 ದಿನಗಳಲ್ಲಿ ಮುಗಿದಿದುದನ್ನು ಗಮನಿಸಿದಾಗ ಲಂಕೆಯ ಸೋಮವಾರದ ಬ್ಯಾಟಿಂಗ್‌ ಚೇತೋಹಾರಿಯಾಗಿತ್ತು. ಆದರೆ ದ್ವಿತೀಯ ಸರದಿಯಲ್ಲೂ ಇಂಥದೇ ಬ್ಯಾಟಿಂಗ್‌ ಪ್ರದರ್ಶನ ನೀಡಿ ಪಂದ್ಯವನ್ನು ಉಳಿಸಿಕೊಂಡರಷ್ಟೇ ಲಂಕೆಗೆ ಪೂರ್ಣಾಂಕ ನೀಡಬಹುದು!

Advertisement

4ನೇ ವಿಕೆಟ್‌ ಬೀಳುವ ತನಕ ಭಾರತದ ಬೌಲಿಂಗ್‌ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಅನಂತರ ಲಂಕಾ ಪಾಲಿಗೆ ಮಾರಕವಾಗಿ ಪರಿಣಮಿಸಿತು. ಬಹಳ ತಡವಾಗಿ ದಾಳಿಗೆ ಇಳಿದ ಅಶ್ವಿ‌ನ್‌ ಶಿಸ್ತಿನ ಬೌಲಿಂಗ್‌ ನಡೆಸಿ 90 ರನ್ನಿಗೆ 3 ವಿಕೆಟ್‌ ಕಿತ್ತರು. ಜಡೇಜ, ಇಶಾಂತ್‌, ಶಮಿ ತಲಾ 2 ವಿಕೆಟ್‌ ಉರುಳಿಸಿದರು.

181 ರನ್ನುಗಳ ಜತೆಯಾಟ
ಏಂಜೆಲೊ ಮ್ಯಾಥ್ಯೂಸ್‌-ದಿನೇಶ್‌ ಚಂಡಿಮಾಲ್‌ 75 ರನ್ನಿಗೆ 3ನೇ ವಿಕೆಟ್‌ ಬಿದ್ದಾಗ ಜತೆಗೂಡಿದ್ದರು. ನಿಧಾನವಾಗಿ ಕ್ರೀಸ್‌ ಆಕ್ರಮಿಸಿಕೊಂಡು ಈ ಮೊತ್ತವನ್ನು 256ರ ತನಕ ತಂದರು. ಆಗ ಲಂಕಾ ಪಡೆ ಭಾರತದ ಮೊತ್ತವನ್ನು ಸಮೀಪಿಸಬಹುದೆಂಬ ದೂರದ ನಿರೀಕ್ಷೆ ಒಂದಿತ್ತು. ಸ್ಕೋರ್‌ 256 ರನ್‌ ಆಗಿದ್ದಾಗ ಮ್ಯಾಥ್ಯೂಸ್‌ ವಿಕೆಟ್‌ ಹಾರಿಸಿದ ಅಶ್ವಿ‌ನ್‌ ಪಂದ್ಯಕ್ಕೆ ತಿರುವು ನೀಡಿದರು.

ಲಂಚ್‌ ತನಕ ಭಾರತಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ. ಅತ್ಯಂತ ನಿಧಾನ ಗತಿಯ ಆಟವಾಡಿದ ಮ್ಯಾಥ್ಯೂಸ್‌-ಚಂಡಿಮಾಲ್‌ ತಂಡದ ಮೊತ್ತಕ್ಕೆ ಕೇವಲ 61 ರನ್‌ ಸೇರಿಸಿದ್ದರು. ಲಂಚ್‌-ಟೀ ನಡುವಿನ ಅವಧಿಯಲ್ಲಿ ಬಂದದ್ದು 78 ರನ್‌ ಮಾತ್ರ. ಆದರೆ ಆಗ ಮ್ಯಾಥ್ಯೂಸ್‌ ಮತ್ತು ಸಮರವಿಕ್ರಮ (33) ವಿಕೆಟ್‌ಗಳನ್ನು ಉರುಳಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.

ಇವರಿಬ್ಬರಲ್ಲಿ ಮೊದಲ ಶತಕ ಸಂಭ್ರಮ ಆಚರಿಸಿದವರು ಏಂಜೆಲೊ ಮ್ಯಾಥ್ಯೂಸ್‌. 72ನೇ ಟೆಸ್ಟ್‌ ಆಡಲಿಳಿದಿದ್ದ ಅವರು 8ನೇ ಶತಕಕ್ಕೆ 231 ಎಸೆತ ತೆಗೆದುಕೊಂಡರು. ಅವರ 111 ರನ್‌ 268 ಎಸೆತಗಳಿಂದ ಬಂತು. ಇದರಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು.

ದಿನೇಶ್‌ ಚಂಡಿಮಾಲ್‌ 44ನೇ ಟೆಸ್ಟ್‌ನಲ್ಲಿ 10ನೇ ಶತಕ ದಾಖಲಿಸಿದರು. 100 ರನ್ನಿಗಾಗಿ ಅವರು 265 ಎಸೆತ ಎದುರಿಸಬೇಕಾಯಿತು. ಅಜೇಯ 147 ರನ್ನಿಗೆ 341 ಎಸೆತಗಳನ್ನು ನಿಭಾಯಿಸಿದ್ದು, 18 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಇನ್ನು 3 ರನ್‌ ಗಳಿಸಿದರೆ 4ನೇ ಸಲ 150ರ ಗಡಿ ತಲುಪಲಿದ್ದಾರೆ.

ಸ್ಕೋರ್‌ಪಟ್ಟಿ
* ಭಾರತ ಪ್ರಥಮ ಇನ್ನಿಂಗ್ಸ್‌        7 ವಿಕೆಟಿಗೆ ಡಿಕ್ಲೇರ್‌ 536
* ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಸಿ ಸಾಹ ಬಿ ಶಮಿ    0
ದಿಲುÅವಾನ್‌ ಪೆರೆರ    ಎಲ್‌ಬಿಡಬ್ಲ್ಯು ಬಿ ಜಡೇಜ    42
ಧನಂಜಯ ಡಿ’ಸಿಲ್ವ    ಎಲ್‌ಬಿಡಬ್ಲ್ಯು ಬಿ ಇಶಾಂತ್‌    1
ಏಂಜೆಲೊ ಮ್ಯಾಥ್ಯೂಸ್‌    ಸಿ ಸಾಹಾ ಬಿ ಅಶ್ವಿ‌ನ್‌    111
ದಿನೇಶ್‌ ಚಂಡಿಮಾಲ್‌    ಬ್ಯಾಟಿಂಗ್‌    147
ಸದೀರ ಸಮರವಿಕ್ರಮ    ಸಿ ಸಾಹಾ ಬಿ ಇಶಾಂತ್‌    33
ರೋಶನ್‌ ಸಿಲ್ವ    ಸಿ ಧವನ್‌ ಬಿ ಅಶ್ವಿ‌ನ್‌    0
ನಿರೋಷನ್‌ ಡಿಕ್ವೆಲ್ಲ    ಬಿ ಅಶ್ವಿ‌ನ್‌    0
ಸುರಂಗ ಲಕ್ಮಲ್‌    ಸಿ ಸಾಹಾ ಬಿ ಶಮಿ    5
ಲಹಿರು ಗಾಮಗೆ    ಎಲ್‌ಬಿಡಬ್ಲ್ಯು ಜಡೇಜ    1
ಲಕ್ಷಣ ಸಂದಕನ್‌    ಬ್ಯಾಟಿಂಗ್‌        0
ಇತರ        16
ಒಟ್ಟು (9 ವಿಕೆಟಿಗೆ)    356
ವಿಕೆಟ್‌ ಪತನ: 1-0, 2-14, 3-75, 4-256, 5-317, 6-318, 7-322, 8-331, 9-343.
ಬೌಲಿಂಗ್‌:
ಮೊಹಮ್ಮದ್‌ ಶಮಿ        24-6-74-2
ಇಶಾಂತ್‌ ಶರ್ಮ        27-6-93-2
ರವೀಂದ್ರ ಜಡೇಜ        44-0-13-85-2
ಆರ್‌. ಅಶ್ವಿ‌ನ್‌        35-8-90-3

Advertisement

Udayavani is now on Telegram. Click here to join our channel and stay updated with the latest news.

Next