Advertisement
ಆರ್ಥಿಕ ಕುಸಿತ, ಚೇತರಿಕೆಯ ವಿವಿಧ ರೂಪಆರ್ಥಿಕ ಹಿಂಜರಿತ ಮತ್ತು ಚೇತರಿಕೆಯ ಗ್ರಾಫ್ ಅನ್ನು ರಚಿಸುವಾಗ ಅದು ವಿ, ಯು, ಎಲ್, ಡಬ್ಲ್ಯು, ಜೆ ಸಹಿತ ಅಸಂಖ್ಯಾಕ ಆಕಾರಗಳಲ್ಲಿ ಕಾಣಿಸ ಬಹುದು. ಪ್ರತಿಯೊಂದು ರೀತಿಯ ಆಕಾರವೂ ಒಂದು ದೇಶದ ಆರ್ಥಿಕ ಆರೋಗ್ಯವನ್ನು ಅಳೆಯುವ ಮಾಪನ. ಡಬ್ಲ್ಯು ಆಕಾರದ ಆರ್ಥಿಕ ಕುಸಿತವೆಂದರೆ, ದೇಶದ ಆರ್ಥಿಕತೆಯೊಂದರಲ್ಲಿ ವೇಗವಾಗಿ ಕುಸಿತ ಕಂಡು ಬಂದು ಅನಂತರ ಅದರಲ್ಲಿ ಚೇತರಿಕೆ ಲಕ್ಷಣಗಳು ಗೋಚರಿಸಿ ಮತ್ತೂಮ್ಮೆ ಆರ್ಥಿಕತೆ ಮುಗ್ಗರಿಸುತ್ತದೆ ಎಂದರ್ಥ. ಯು ಆಕಾರದ ಚೇತರಿಕೆಯೆಂದರೆ, ತೀವ್ರ ಕುಸಿತ ಕಂಡಿರುವ ಆರ್ಥಿಕತೆ ನಿರ್ದಿಷ್ಟ ಅವಧಿಯವರೆಗೆ ನಿಶ್ಚಲವಾಗಿದ್ದು, ಇದರ ಬೆನ್ನಲ್ಲೇ ತನ್ನ ಹಿಂದಿನ ಸ್ಥಿತಿಗೆ ಚೇತರಿಕೆ ಕಾಣುವುದು. ಈಗಲೂ ಕೆಲವು ಅರ್ಥಶಾಸ್ತ್ರಜ್ಞರು ಭಾರತವು ವಿ ಬದಲು ಯು ಆಕಾರದ ಚೇತರಿಕೆ ಕಾಣಬಹುದು ಎಂದು ಪ್ರತಿಪಾದಿಸುತ್ತಾರೆ.
ಹೆಸರೇ ಸೂಚಿಸುವಂತೆ, ಈ ಚೇತರಿಕೆಯು ವಿ ಆಕಾರದಲ್ಲಿ ಕಾಣಿಸುತ್ತದೆ. ಆರ್ಥಿಕ ಹಿಂಜರಿತದಿಂದಾಗಿ ದೇಶವೊಂದರ ಆರ್ಥಿಕತೆಯು ಹಠಾತ್ತನೆ ಕೆಳಕ್ಕೆ ಕುಸಿದು, ಅನಂತರ ಅಷ್ಟೇ ತ್ವರಿತವಾಗಿ ಮತ್ತು ಶಕ್ತಿಯುತವಾಗಿ ಚೇತರಿಸಿಕೊಂಡು ಮೇಲೆದ್ದಾಗ ಗ್ರಾಫ್ ವಿ ಆಕಾರದಲ್ಲಿ ಕಾಣುತ್ತದೆ. ಉದ್ಯೋಗ ದರಗಳು, ಜಿಡಿಪಿ, ಕೈಗಾರಿಕ ಉತ್ಪಾದನ ಸೂಚ್ಯಂಕಗಳಂಥ ಅಂಶಗಳನ್ನು ಆಧರಿಸಿ ಅರ್ಥಶಾಸ್ತ್ರಜ್ಞರು ಈ ಗ್ರಾಫ್ ಸಿದ್ಧಪಡಿಸುತ್ತಾರೆ. ವಿ ಆಕಾರದ ಚೇತರಿಕೆಯನ್ನು ಅತ್ಯುತ್ತಮ ಬೆಳವಣಿಗೆಯೆಂದು ಪರಿಗಣಿಸಲಾಗುತ್ತದೆ. ಚೇತರಿಕೆಗೆ ಕಾರಣವೇನು?
ಖರೀದಿ, ಬೇಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಸುಧಾರಣ ಕ್ರಮಗಳು, ಉತ್ಪಾದನೆಯಲ್ಲಿ ಹೆಚ್ಚಳ, ಮೂಲ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಕಗಳು ಈ ಮಾದರಿಯ ಚೇತರಿಕೆ ಹಾಗೂ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಿತ್ತ ಸಚಿವರು ಮಂಡಿಸಿರುವ ಆರ್ಥಿಕ ಸಮೀಕ್ಷೆ ಹೇಳುತ್ತಿದೆ.