ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಸ್ತಾಪಿತ “ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ”ಯ ಮೂಲಕ ಭಾರತದಲ್ಲಿರುವ ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ (ಆಗಸ್ಟ್ 25) ಆರೋಪಿಸಿದ್ದಾರೆ.
ಇದನ್ನೂ ಓದಿ:ಬೌದ್ಧಿಕವಾಗಿ ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ : ನಳೀನ್ ಕುಮಾರ್ ಕಟೀಲ್
ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಮೊದಲು ನಂಬಿಕೆಯನ್ನು ಮಾರಾಟ ಮಾಡಿದ್ದು, ಇದೀಗ ಭಾರತವನ್ನು ಮಾರಾಟಕ್ಕಿಟ್ಟಿರುವುದಾಗಿ ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಹಣಕಾಸು ಮೂಲವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಗದೀಕರಣ ಯೋಜನೆ ಜಾರಿ ಮಾಡುವುದಾಗಿ ತಿಳಿಸಿತ್ತು.
ಭಾರತದ ಮೂಲ ಸೌಕರ್ಯ ಅಭಿವೃದ್ಧಿಗೆ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ನಗದೀಕರಣ ಯೋಜನೆಯಲ್ಲಿ ವಿದ್ಯುತ್ ಗ್ರಿಡ್, ರೈಲ್ವೆ, ರಸ್ತೆ ಕೂಡಾ ಸೇರಿತ್ತು. ಈ ಯೋಜನೆ ಮೂಲಕ ಮೂಲ ಸೌಕರ್ಯಕ್ಕಾಗಿ ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಿದೆ ಎಂದು ವರದಿ ವಿವರಿಸಿದೆ.
ಆದರೆ ಕೇಂದ್ರದ ಈ ಯೋಜನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಹಿಂದಿನ ಸರ್ಕಾರಗಳು ತಮ್ಮ ಅವಧಿಯಲ್ಲಿ ನಿರ್ಮಿಸಿದ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಲು ಹೊರಟಿದೆ. ಸರ್ಕಾರ ಈ ಆಸ್ತಿಗಳನ್ನು ಖಾಸಗಿಯವರಿಗೆ ವಹಿಸುವುದು ಖಾಸಗಿ ಏಕಸ್ವಾಮ್ಯ ಹೆಚ್ಚಾಗುವಂತೆ ಮಾಡಲಿದೆ ಎಂದು ತಿಳಿಸಿದ್ದರು.
ದೇಶದ ರೈಲ್ವೆ ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆ ಮಾರ್ಗ, ವಿದ್ಯುತ್ ವಲಯದ ಯೋಜನೆಗಳನ್ನು ಖಾಸಗಿ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ವರ್ಗಾಯಿಸಲು ಮುಂದಾಗಿದ್ದು, ಈ ಮೂಲಕ ದೇಶವನ್ನು ಮಾರಾಟ ಮಾಡಲು ಹೊರಟಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.