Advertisement

ದಕ್ಷಿಣ ದಂಡೆಗೆ ಭಾರತವೇ ದೊರೆ ; ಮಂಗಳವಾರವೂ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನ

01:43 AM Sep 02, 2020 | Hari Prasad |

ಲಡಾಖ್: ಭಾರತದ ನೆಲದ ಮೇಲೆ ಕಣ್ಣು ಹಾಕಿದ ಚೀನಕ್ಕೆ ನಮ್ಮ ವೀರ ಯೋಧರು ಸರಿಯಾಗಿ ಪಾಠ ಕಲಿಸಿದ್ದರೂ ಅದು ಚಾಳಿ ಮುಂದುವರಿಸಿದೆ!

Advertisement

ಮಂಗಳವಾರ ಮತ್ತೆ ಚುಮಾರ್‌ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನದ ಸೈನಿಕರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ವೈರಿ ಸೇನೆಯ 7-8 ದೊಡ್ಡ ವಾಹನಗಳು ಭಾರತದತ್ತ ಮುಂದೊತ್ತಿದ್ದವು.

ಕಳೆದ 3 ದಿನಗಳಲ್ಲಿ ಇದು ಚೀನದ ಎರಡನೇ ಅತಿಕ್ರಮಣ ಯತ್ನವಾಗಿದೆ. ಈ ಎರಡನೇ ಯತ್ನದ ಬಗ್ಗೆಯೂ ರಕ್ಷಣ ಇಲಾಖೆ ಖಚಿತಪಡಿಸಿದೆ.

ಪ್ಯಾಂಗಾಂಗ್‌ನ ದಕ್ಷಿಣ ದಂಡೆ ಮೇಲೆ ಕಣ್ಣಿಟ್ಟಿರುವ ಚೀನದ ಸೇನೆಯು ಈಗ ವಾಸ್ತವ ನಿಯಂತ್ರಣ ರೇಖೆಯಲ್ಲಿ ದಿಕ್ಕೆಟ್ಟಿದೆ. ದಕ್ಷಿಣ ದಂಡೆಯ ಪ್ರಮುಖ ರಿಡ್ಜ್ ಪಾಯಿಂಟ್‌ಗಳಲ್ಲದೆ, ಬಿಕ್ಕಟ್ಟಿಗೆ ತುತ್ತಾಗಿದ್ದ ಪ್ರದೇಶಗಳನ್ನು ಭಾರತೀಯ ಸೇನೆ ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿರುವುದು ಪಿಎಲ್‌ಎಯನ್ನು ತಬ್ಬಿಬ್ಟಾಗಿಸಿದೆ.

ಸ್ಥಳದಲ್ಲಿ ತುಕಡಿಗಳನ್ನು ನಿಯೋಜಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಸಂಖ್ಯೆಯ ಯೋಧರು ಗಡಿ ರಕ್ಷಣೆಗೆ ಎದೆಯೊಡ್ಡಿದ್ದಾರೆ. ಇಲ್ಲಿನ ಪ್ರಮುಖ ಶಿಖರಗಳಲ್ಲೂ ಭಾರತ ತುಕಡಿ ನಿಲ್ಲಿಸಿದೆ. ದಕ್ಷಿಣ ದಂಡೆಗೆ ಸಮೀಪದ ಫಿಂಗರ್‌ 4 ಮತ್ತು 8ರಲ್ಲಿ ಚೀನದ ಟ್ಯಾಂಕರ್‌ಗಳು, ಸೈನಿಕ ತುಕಡಿಗಳನ್ನು ಕಟ್ಟಿ ಹಾಕಲು ಈ ತಂತ್ರ ರೂಪಿಸಿದ್ದೇವೆ ಎಂದು ಹಿರಿಯ ರಕ್ಷಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾಂಗಾಂಗ್‌ನ ದಕ್ಷಿಣ ದಂಡೆಗೆ ತುಸು ಆಚೆಗಿರುವ ಸ್ಪ್ಯಾಂಗ್ಗೂರ್‌ ಸರೋವರ ಮತ್ತು ಚುಶುಲ್‌ ನಡುವಿನ ನೈಋತ್ಯ ಫ್ಲ್ಯಾಶ್‌ ಪಾಯಿಂಟ್‌ ನಲ್ಲೂ ಭಾರತೀಯ ಟ್ಯಾಂಕ್‌ ರೆಜಿಮೆಂಟ್‌ ಭದ್ರಕೋಟೆ ಕಟ್ಟಿದೆ ಎಂದು ಮೂಲಗಳು ತಿಳಿಸಿವೆ.

Advertisement

ಚೀನದ ಕಳ್ಳಗಣ್ಣುಗಳನ್ನೇ ಕಿತ್ತ ಯೋಧರು!
ಆಗಸ್ಟ್‌ 29ರ ರಾತ್ರಿಯಲ್ಲಿ ಭಾರತೀಯ ವೀರಯೋಧರು ಪಿಎಲ್‌ಎಯನ್ನು ಹಿಮ್ಮೆಟ್ಟಿಸಿದ್ದಷ್ಟೇ ಅಲ್ಲ. ಪ್ಯಾಂಗಾಂಗ್‌ ದಕ್ಷಿಣ ದಂಡೆಯ ಸಮೀಪ ಚೀನ ನೆಟ್ಟಿದ್ದ “ಕಳ್ಳಗಣ್ಣು’­ ಗಳನ್ನೂ ಕಿತ್ತುಹಾಕಿದೆ. ಭಾರತೀಯ ಸೇನೆಯ ಚಲನವಲನಗಳನ್ನು ಗಮನಿಸಲು ಎತ್ತರದ ಪ್ರದೇಶ ಗಳಲ್ಲಿ ಸಿಸಿ ಕೆಮರಾ, ಕಣ್ಗಾವಲು ಸಾಧನಗಳನ್ನು ಚೀನ ರಹಸ್ಯವಾಗಿ ಅಳವಡಿಸಿತ್ತು. ಇವನ್ನೆಲ್ಲ ತೆಗೆದುಹಾಕುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಥಾಕುಂಗ್‌ ಸಮೀಪದ ಎತ್ತರದ ಪ್ರದೇಶಗಳಿಂದಲೂ ಚೀನ ಈ ಗಡಿ ಕಣ್ಗಾವಲು ತಂತ್ರಜ್ಞಾನಗಳನ್ನು ಅಳವಡಿಸಿತ್ತು ಎಂದವು ತಿಳಿಸಿವೆ.


ಕಾಲಾಟಾಪ್‌ನಲ್ಲೇ ಮುಗ್ಗರಿಸಿದ ಚೀನ

ಭಾರತೀಯ ಪಡೆಗಳ ಹಿಡಿತದಲ್ಲಿರುವ ಕಾಲಾ ಟಾಪ್‌ ಶಿಖರದ ಬುಡದಲ್ಲಿಯೇ ಪಿಎಲ್‌ಎ ಪಡೆಗಳು ಠಿಕಾಣಿ ಹೂಡಿವೆ. ಕಾಲಾಟಾಪ್‌ನಲ್ಲಿರುವ ಭಾರತದ ವಿಶೇಷ ಗಡಿನಾಡು ಪಡೆ (ಎಸ್‌ಎಫ್ಎಫ್) ಶಸ್ತ್ರಸಜ್ಜಿತವಾಗಿದ್ದು, ಟ್ಯಾಂಕರ್‌ ಮತ್ತು ಫಿರಂಗಿ ದಳವನ್ನೂ ಹೊಂದಿರುವುದು ಚೀನಕ್ಕೆ ಮುಂದಡಿ ಇರಿಸಲು ತಡೆಯಾಗಿದೆ. ಅಕ್ಕಪಕ್ಕದ ಬೆಟ್ಟಗಳ ಮೇಲೂ ಭಾರತ ಸೇನಾ ತುಕಡಿಗಳನ್ನು ನಿಯೋಜಿಸಿದ್ದು, ಪಿಎಲ್‌ಎಗೆ ಮುಂದುವರಿಯಲು ದಾರಿಯೇ ಇಲ್ಲವಾಗಿದೆ. 1962ರಲ್ಲೂ ಚೀನವು ಪ್ಯಾಂಗಾಂಗ್‌ ದಂಡೆಯನ್ನು ಸಂಘರ್ಷದ ನೆಲೆಯಾಗಿಸಿತ್ತು. ಆಗಲೂ ಭಾರತೀಯ ಸೇನೆ ಪಿಎಲ್‌ಎ ಸೈನಿಕರನ್ನು ಓಡಿಸುವಲ್ಲಿ ಸಫ‌ಲವಾಗಿತ್ತು.

ಆ. 30ರ ರಾತ್ರಿ ಚೀನದ ಸದ್ದಡಗಿಸಿದ್ದ ಸೇನೆ
ಆ. 30ರ ರಾತ್ರಿ ಪಿಎಲ್‌ಎ ಪಡೆಯ ಸುಮಾರು 500ಕ್ಕೂ ಅಧಿಕ ಸೈನಿಕರು ಟ್ಯಾಂಕರ್‌ಗಳೊಂದಿಗೆ ಮುನ್ನುಗ್ಗಿದ್ದರು. ಪರ್ವತಾರೋಹಿ ಹಗ್ಗಗಳು, ಸಲಕರಣೆಗಳನ್ನು ಹಿಡಿದು ದಕ್ಷಿಣ ದಂಡೆಯ ಬ್ಲ್ಯಾಕ್‌ ಟಾಪ್‌ ಮತ್ತು ಥಾಕುಂಗ್‌ ಶಿಖರ ಏರಲು ಯತ್ನಿಸುತ್ತಿರುವಾಗಲೇ ಭಾರತೀಯ ವೀರ ಯೋಧರು ಸುತ್ತುವರಿದು, ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಮುಖಾಮುಖಿ ವೇಳೆ ಮಾತಿನ ಚಕಮಕಿ ನಡೆಯಿತೇ ವಿನಾ ಸಂಘರ್ಷ ಏರ್ಪಡಲಿಲ್ಲ. ಭಾರತದ ಬೃಹತ್‌ ಸಂಖ್ಯೆಯ ಯೋಧರು ಜಮೆಯಾಗುತ್ತಲೇ ಚೀನವು ಮಾತಿನ ಸದ್ದನ್ನೂ ನಿಲ್ಲಿಸಿತ್ತು ಎಂದು ತಿಳಿಸಿವೆ.

ಮುಖಾಮುಖಿ ಭಾರತೀಯ ಸೇನೆ
ನಿಯೋಜನೆಗೆ ಪ್ರತಿಯಾಗಿ ಪ್ಯಾಂಗಾಂಗ್‌ ದಂಡೆಯಲ್ಲಿ ಚೀನವೂ ಸೈನಿಕರನ್ನು ನಿಯೋಜಿಸಿದೆ, ಟ್ಯಾಂಕರ್‌ಗಳನ್ನು ತಂದು ನಿಲ್ಲಿಸಿದೆ. ಉಭಯ ರಾಷ್ಟ್ರಗಳ ಸೈನಿಕರು ‘ಫೈರಿಂಗ್‌’ ಅಳತೆಯ ಅಂತರದಲ್ಲಿ ಮುಖಾಮುಖಿ ಆಗಿರುವುದು ಸಹಜವಾಗಿ ಉದ್ವಿಗ್ನತೆ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next