ನವದೆಹಲಿ: ಜಾಗತಿಕವಾಗಿ ಕೋವಿಡ್ 19 ಮಹಾಮಾರಿ ಸೋಂಕು ಪ್ರಕರಣ ಪತ್ತೆಯಾಗುತ್ತಿರುವ ನಡುವೆಯೇ ಆಶಾದಾಯಕ ಬೆಳವಣಿಗೆ ಎಂಬಂತೆ ಭಾರತದಲ್ಲಿ ಈವರೆಗೆ 37,80, 107 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗುವ ಮೂಲಕ ಬ್ರೆಝಿಲ್ ಅನ್ನು ಹಿಂದಿಕ್ಕಿರುವುದಾಗಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶ ತಿಳಿಸಿದೆ.
ಲಾಕ್ ಡೌನ್ ಸೇರಿದಂತೆ ಕೇಂದ್ರ ಸರ್ಕಾರ ಸಕಾಲಕ್ಕೆ ಕೈಗೊಂಡ ದಿಟ್ಟ ನಿರ್ಧಾರದಿಂದಾಗಿ ಕೋವಿಡ್ 19 ವೈರಸ್ ನಿಂದ ಉಂಟಾಗಲಿರುವ ದೊಡ್ಡ ಆಪತ್ತಿನಿಂದ ಭಾರತ ಪಾರಾಗಿದೆ ಎಂದು ವರದಿ ಹೇಳಿದೆ.
ಅಂಕಿ ಅಂಶದ ಪ್ರಕಾರ, ಜಾಗತಿಕವಾಗಿ 29,006,033 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 19,625,959 ಮಂದಿ ಗುಣಮುಖರಾಗಿದ್ದಾರೆ. ವಿಶ್ವಾದ್ಯಂತ ಕೋವಿಡ್ 19 ಸೋಂಕಿಗೆ 9,24,105 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ನೇಣು ಹಾಕಿಕೊಂಡಿದ್ದರೆ ಹೀಗೆ ಹೇಳ್ತೀರಾ? ಜಯಾ ಬಚ್ಚನ್ ಗೆ ಕಂಗನಾ ತಿರುಗೇಟು
ಜಾನ್ಸ್ ಹಾಪ್ಕಿನ್ಸ್ ಯೂನಿರ್ವಸಿಟಿ ಬಿಡುಗಡೆ ಮಾಡಿರುವ ಕೋವಿಡ್ 19 ಜಾಗತಿಕ ಅಂಕಿಅಂಶದಲ್ಲಿ, ಕೋವಿಡ್ 19 ಪ್ರಕರಣದಲ್ಲಿ ಅತೀ ಹೆಚ್ಚು ಗುಣಮುಖ ಹೊಂದಿರುವ ದೇಶದಲ್ಲಿ ಭಾರತ (37,80,107) ಪ್ರಥಮ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ (37,23,206) ಸ್ಥಾನದಲ್ಲಿದೆ. ಅಮೆರಿಕ 3ನೇ (24,51,406) ಸ್ಥಾನದಲ್ಲಿರುವುದಾಗಿ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕಿತರ ಚೇತರಿಕೆಯ ಪ್ರಮಾಣ ಶೇ.78ಕ್ಕೆ ತಲುಪಿದ್ದು, ದಿನಂಪ್ರತಿ ಕೋವಿಡ್ 19 ಸೋಂಕಿತರು ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ವಿವರಿಸಿದೆ.
ಕಳೆದ 24 ಗಂಟೆಯಲ್ಲಿ 77,512 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ 37, 80,107 ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೋವಿಡ್ 19 ಪ್ರಕರಣಗಳ ಚೇತರಿಕೆಯ ಸಂಖ್ಯೆ ಶೇ.60ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.