Advertisement

ಭಾರತ-ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಮಳೆ ಆತಂಕ!

02:09 AM Jun 12, 2019 | mahesh |

ಲಂಡನ್‌: ವಿಶ್ವಕಪ್‌ ಪಂದ್ಯಾವಳಿ ಮಳೆಯಿಂದ ತೊಯ್ದು ಹೋಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆ ಈ ಪ್ರತಿಷ್ಠಿತ ಕೂಟದ ಆಕರ್ಷಣೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ. ಬಹುಶಃ ಫೈನಲ್ ಪ್ರವೇಶಿಸಿದ ತಂಡಗಳು ಜಂಟಿಯಾಗಿ ಟ್ರೋಫಿ ಎತ್ತಬೇಕೋ ಏನೋ ಎಂಬ ಜೋಕ್‌ ಹರಿದಾಡಲಾರಂಭಿಸಿದೆ!

Advertisement

ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಅಂಕವನ್ನು ಹಂಚುವುದು ಸದ್ಯದ ಮಟ್ಟಿಗೆ ಅನಿವಾರ್ಯ. ಇದರಿಂದ ಕೂಟದ ಅಷ್ಟೂ ಲೆಕ್ಕಾಚಾರ ತಲೆ ಕೆಳಗಾಗುವುದು ಖಂಡಿತ.

ಈಗಾಗಲೇ ಪಾಕಿಸ್ಥಾನ-ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ-ವೆಸ್ಟ್‌ ಇಂಡೀಸ್‌ ಪಂದ್ಯಗಳು ಮಳೆಯಿಂದ ಕೊಚ್ಚಿ ಹೋಗಿವೆ. ಸದ್ಯ ಭಾರತದ 2 ಪಂದ್ಯಗಳಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಗುರುವಾರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಮಳೆಯಿಂದ ಅಡಚಣೆ ಆಗುವ ಸಾಧ್ಯತೆ ಇದೆ.

ಏನಿದು ಹಳದಿ ವಾರ್ನಿಂಗ್‌?
ಕಳೆದ 2 ದಿನಗಳಿಂದ ಇಂಗ್ಲೆಂಡ್‌ನ‌ಲ್ಲಿ ಸತತವಾಗಿ ಮಳೆಯಾಗುತ್ತಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಸಾರ್ವಜನಿಕರಿಗೆ ಒಂದು ವಾರ ಕಾಲ ‘ಯೆಲ್ಲೋ ವಾರ್ನಿಂಗ್‌’ಜಾರಿಗೊಳಿಸಲಾಗಿದೆ ಎಂದು ‘ನಾಟಿಂಗ್‌ಹ್ಯಾಮ್‌ ಪೋಸ್ಟ್‌’ ವರದಿ ಮಾಡಿದೆ. 3 ಬಣ್ಣಗಳಲ್ಲಿ ಮಳೆ ಎಚ್ಚರಿಕೆಯನ್ನು ನೀಡುವುದು ಯು.ಕೆ. ಹವಾಮಾನ ಇಲಾಖೆಯ ಕ್ರಮ. ‘ಯೆಲ್ಲೋ ವಾರ್ನಿಂಗ್‌’ ಪ್ರಕಾರ ಇದೇನೂ ಭಾರೀ ಅನಾಹುತದ ಮಳೆಯಲ್ಲ, ಸಾರ್ವಜನಿಕರು ಈ ಮಳೆಯನ್ನು ನಿಭಾಯಿಸಬಹುದಾಗಿದೆ. ಆದರೆ ಕ್ರಿಕೆಟ್ ಪಂದ್ಯದ ಅಡಚಣೆಗೆ ಇದು ಧಾರಾಳ ಸಾಕು!

ಕಾಡುತ್ತಿದೆ ತೀವ್ರ ಚಳಿ
ನಾಟಿಂಗ್‌ಹ್ಯಾಮ್‌ನಲ್ಲಿ ಸತತ ಮಳೆಯಾಗುತ್ತಿದ್ದು, ಇದು ಬುಧವಾರ ಸಂಜೆ 7 ಗಂಟೆ ತನಕ ಮುಂದುವರಿಯಲಿದೆ. ಇಲ್ಲಿಗೆ ಮಳೆಗೆ ಒಂದು ಹಂತದ ವಿರಾಮ ಸಿಗಲಿದೆ. ಗುರುವಾರ ಅಪರಾಹ್ನ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಗರಿಷ್ಠ ತಾಪಮಾನ 13 ಡಿಗ್ರಿ ಸಿ.. ಕನಿಷ್ಠ ತಾಪಮಾನ 10-11 ಡಿಗ್ರಿ ಸಿ. ಆಗಿರಲಿದೆ. ಈ ತೀವ್ರ ಚಳಿಯ ತಾಪಮಾನವನ್ನು ಸಹಿಸಿಕೊಳ್ಳುವುದು ಭಾರತೀಯ ಕ್ರಿಕೆಟಿಗರಿಗೆ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಆದರೆ ನ್ಯೂಜಿಲ್ಯಾಂಡಿಗೆ ಇಂಥ ವಾತಾವರಣದಲ್ಲಿ ಆಡಿದ ಅಭ್ಯಾಸವಿದೆ.
Advertisement

Udayavani is now on Telegram. Click here to join our channel and stay updated with the latest news.

Next