Advertisement

ಕೈಲ್ ಜ್ಯಾಮಿನ್ಸನ್ ದಾಳಿಗೆ ಕೊಹ್ಲಿ ಪಡೆ ಕಂಗಾಲು ; ಟೀಂ ಇಂಡಿಯಾ 242 ಕ್ಕೆ ಆಲೌಟ್

08:58 AM Mar 01, 2020 | Hari Prasad |

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳ ಘೋರ ವೈಫಲ್ಯ ಮತ್ತೆ ಮುಂದುವರೆದಿದೆ. ಮೊದಲನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಗಳಿಂದ ಕಳೆದುಕೊಂಡಿದ್ದ ಕೊಹ್ಲಿ ಪಡೆ ಇಂದು ಪ್ರಾರಂಭಗೊಂಡ ಎರಡನೇ ಟೆಸ್ಟ್ ನಲ್ಲೂ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದೆ.

Advertisement

ಕ್ರೈಸ್ಟ್ ಚರ್ಚ್ ನ ಸೀಮರ್ ಸ್ನೇಹಿ ಪಿಚ್ ನಲ್ಲಿ ಟಾಸ್ ಗೆಲ್ಲುವ ಅದೃಷ್ಟ ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಅವರದ್ದಾಯಿತು. ಕಪ್ತಾನನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಕಿವೀಸ್ ವೇಗಿಗಳು ಭಾರತೀಯ ಬ್ಯಾಟ್ಸ್ ಮನ್ ಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು.


ಭಾರತೀಯ ಬ್ಯಾಟಿಂಗ್ ಪಡೆಯ ಮೇಲೆ ಘಾತಕವಾಗಿ ಎರಗಿದ ಕಿವೀಸ್ ಯುವ ವೇಗಿ ಕೈಲ್ ಅಲೆಕ್ಸ್ ಜ್ಯಾಮಿಸನ್ ದಾಳಿಗೆ ಕಂಗೆಟ್ಟ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನವೇ 242 ರನ್ ಗಳಿಸಿ ಆಲೌಟಾಗಿದೆ. ತನ್ನ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜ್ಯಾಮಿಸನ್ 14 ಓವರ್ ಗಳ ದಾಳಿಯಲ್ಲಿ 45 ರನ್ ಗಳಿಗೆ 5 ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ ಪೃಥ್ವೀ ಶಾ, ಪೂಜಾರ, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರಂತಹ ಪ್ರಮುಖ ವಿಕೆಟ್ ಗಳೇ ಸೇರಿತ್ತು.

ಆರಂಭಿಕ ಆಟಗಾರ ಪೃಥ್ವೀ ಶಾ (54), ಚೇತೇಶ್ವರ ಪೂಜಾರ (54) ಮತ್ತು ಹನುಮ ವಿಹಾರಿ (55) ಅವರ ತ್ರಿವಳಿ ಅರ್ಧಶತಕದ ಹೊರತಾಗಿಯೂ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲವಾದ ಭಾರತ ಮೊದಲ ದಿನ ಆಟದಲ್ಲೇ 242 ರನ್ ಗಳಿಗೆ ಆಲೌಟ್ ಆಯಿತು.

ಕೊಹ್ಲಿ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ವಿಲಿಯಮ್ಸ್ ಪಡೆ ತನ್ನ ಪ್ರಥಮ ಇನ್ನಿಂಗ್ಸ್ ಬ್ಯಾಟಿಂಗ್ ಪ್ರಾರಂಭಿಸಿದ್ದು ಮೊದಲ ದಿನದ ಅಂತ್ಯಕ್ಕೆ ನ್ಯೂಝಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದೆ. 27 ರನ್ ಗಳಿಸಿರುವ ಟಾಮ್ ಲಾಥಂ ಹಾಗೂ 29 ರನ್ ಗಳಿಸಿರುವ ಟಾಂ ಬ್ಲಂಡೆಲ್ ಕ್ರೀಸಿನಲ್ಲಿದ್ದಾರೆ.


ಕೈಕೊಟ್ಟ ಓಪನಿಂಗ್ ಕಾಂಬಿನೇಷನ್
ಮೊದಲ ಟೆಸ್ಟ್ ನಲ್ಲಾದಂತೆ ಇಲ್ಲೂ ಸಹ ಭಾರತಕ್ಕೆ ಆರಂಭಿಕ ಆಟಗಾರರ ಕಾಂಬಬಿನೇಷನ್ ಕೈಕೊಟ್ಟಿತು. ಇನ್ನಿಂಗ್ಸ್ ಪ್ರಾರಂಭಿಸಿದ ಪೃಥ್ವೀ ಶಾ (54) ಹಾಗೂ ಮಯಾಂಕ್ ಅಗರ್ವಾಲ್ (7) ಪೈಕಿ ಶಾ ಮಾತ್ರ ಅರ್ಧಶತಕ ಗಳಿಸಿ ಮಿಂಚಿದರೆ ಅಗರ್ವಾಲ್ 7 ರನ್ನಿಗೆ ತನ್ನ ಆಟ ಮುಗಿಸಿದರು.

ಮತ್ತೆ ಬಂದ ಚೇತೇಶ್ವರ ಪೂಜಾರ (54) ಹಾಗೂ ಪೃಥ್ವೀ ಶಾ ಸೇರಿಕೊಂಡು ಇನ್ನಿಂಗ್ಸ್ ಕಟ್ಟತೊಡಗಿದರು. ಇವರಿಬ್ಬರ ನಡುವೆ 50 ರನ್ ಗಳ ಜೊತೆಯಾಟ ದಾಖಲಾಯಿತು. ಶಾ ಬಿರುಸಿನ ಆಟವಾಡಿದರೆ ಪೂಜಾರ ಅಪ್ಪಟ ಟೆಸ್ಟ್ ಶೈಲಿಯಲ್ಲೇ ಬ್ಯಾಟಿಂಗ್ ಮಾಡಿದರು.

Advertisement

ಕ್ಯಾಪ್ಟನ್ ಕೊಹ್ಲಿ ಮತ್ತೆ ವಿಫಲ ; ಮಿಂಚದ ಪಂತ್ ; ಹನುಮ ವಿಹಾರಿ ಫಿಪ್ಟೀ
ಓಪನಿಂಗ್ ನಂತೇ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಪ್ರದರ್ಶನವೂ ಸಹ ಇಂದು ನಿರಾಶದಾಯಕವಾಗಿತ್ತು. ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಔಟಾದರೆ, ಅಜಿಂಕ್ಯ ರಹಾನೆ 7 ರನ್ ಗೆ ವಿಕೆಟ್ ಒಪ್ಪಿಸಿದರು. ಇನ್ನು ರಿಷಭ್ ಪಂತ್ ಗಳಿಕೆ 12ಕ್ಕೆ ಸೀಮಿತವಾದರೆ ಅನುಭವಿ ರವೀಂದ್ರ ಜಡೇಜಾ 9 ರನ್ನಿಗೆ ಔಟಾಗಿ ನಿರಾಶೆ ಮೂಡಿಸಿದರು.

ಇದ್ದುದರಲ್ಲಿ ಹನುಮ ವಿಹಾರಿ ಅವರೇ ವಾಸಿ. ಪೂಜಾರ ಜೊತೆಗೆ 81 ರನ್ ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದ ವಿಹಾರಿ ಅರ್ಧಶತಕ ಬಾರಿಸಿ ಗಮನ ಸೆಳೆದರು. ಅಂತಿಮವಾಗಿ ಮಹಮ್ಮದ್ ಶಮಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 16 ರನ್ ಗಳಿಸಿ ಸಿಡಿಯಲು ಯತ್ನಿಸಿದರೂ ಬೌಲ್ಟ್ ಬೌಲಿಂಗ್ ಮುಂದೆ ಅವರ ಆಟ ನಡೆಯಲಿಲ್ಲ.

ಕೈಲ್ ಜ್ಯಾಮಿಸನ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದರೆ. ಅನುಭವಿ ವೇಗಿಗಳಾದ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಬಿಗು ದಾಳಿ ಸಂಘಟಿಸಿ ತಲಾ 2 ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ನೈಲ್ ವ್ಯಾಗ್ನರ್ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next