Advertisement

ಭಾರತ-ನ್ಯೂಜಿಲ್ಯಾಂಡ್‌: ಸೆಮಿ ಪಂದ್ಯಕ್ಕೆ ಮಳೆ ಅಡ್ಡಿ

06:51 AM Jul 10, 2019 | sudhir |

ಮ್ಯಾಂಚೆಸ್ಟರ್‌: ಭಾರೀ ನಿರೀಕ್ಷೆಯ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮಂಗಳ ವಾರದ ಮೊದಲ ವಿಶ್ವಕಪ್‌ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕಿವೀಸ್‌ 46.1 ಓವರ್‌ಗಳ ಆಟವಾಡಿದ ವೇಳೆ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿದೆ. ಆಗ ವಿಲಿಯಮ್ಸನ್‌ ಪಡೆ 5 ವಿಕೆಟಿಗೆ 211 ರನ್‌ ಮಾಡಿತ್ತು. ಪಂದ್ಯ ಇದೇ ಹಂತದಿಂದ ಬುಧವಾರ ಮುಂದುವರಿಯಲಿದೆ.

Advertisement

ಭಾರತ-ನ್ಯೂಜಿಲ್ಯಾಂಡ್‌ ನಡುವೆ ಜೂ. 13ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯ ಬೇಕಿದ್ದ ಲೀಗ್‌ ಪಂದ್ಯದ ವೇಳೆಯೂ ಮಳೆ ಆಟವಾಡಿತ್ತು. ಈ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.

ತಂಡದ ಆಪತ್ಬಾಂಧವರೇ ಆಗಿರುವ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲ್ಯಾಂಡ್‌ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇಬ್ಬರ ಗಳಿಕೆಯೂ 67 ರನ್‌ ಆಗಿತ್ತು. ಇವರಲ್ಲಿ ವಿಲಿಯಮ್ಸನ್‌ ಔಟಾಗಿದ್ದರೆ, ಮಳೆ ಬಂದು ಪಂದ್ಯ ನಿಂತಾಗ ಟೇಲರ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

10 ಓವರ್‌ಗಳಲ್ಲಿ ಬರೀ 27 ರನ್‌!

ಭುವನೇಶ್ವರ್‌ ಮತ್ತು ಬುಮ್ರಾ ಅವರ ಘಾತಕ ಸ್ಪೆಲ್ಗೆ ತತ್ತರಿಸಿದ ನ್ಯೂಜಿಲ್ಯಾಂಡ್‌ ರನ್‌ ಗಳಿಸಲು ಪರದಾಡಿತು. ಇಬ್ಬರೂ ತಮ್ಮ ಮೊದಲ ಓವರ್‌ ಮೇಡನ್‌ ಮಾಡಿದರು. ಕಿವೀಸ್‌ ಖಾತೆ ತೆರೆದದ್ದೇ 17ನೇ ಎಸೆತದಲ್ಲಿ! ಅಷ್ಟೇ, ಈ ಒಂದು ರನ್ನಿಗೇ ಮಾರ್ಟಿನ್‌ ಗಪ್ಟಿಲ್ ತೃಪ್ತಿಪಟ್ಟರು. ಒಟ್ಟು 14 ಎಸೆತ ಎದುರಿಸಿದ ಅವರು ಬುಮ್ರಾ ಎಸೆದ ಮುಂದಿನ ಓವರಿನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ತಂಡದ ಸ್ಕೋರ್‌ 3.3 ಓವರ್‌ಗಳಲ್ಲಿ ಬರೀ ಒಂದು ರನ್‌ ಆಗಿತ್ತು. ಅಲ್ಲಿಗೆ ನ್ಯೂಜಿಲ್ಯಾಂಡ್‌ ಓಪನಿಂಗ್‌ ವೈಫ‌ಲ್ಯ ನಾಕೌಟ್‌ನಲ್ಲೂ ಮುಂದುವರಿದಂತಾಯಿತು.

Advertisement

ತಂಡದ ಮತ್ತೂಬ್ಬ ಆರಂಭಕಾರ ಹೆನ್ರಿ ನಿಕೋಲ್ಸ್ ಕೂಡ ರನ್ನಿಗಾಗಿ ಪರದಾಡಿದರು. 19ನೇ ಓವರ್‌ ತನಕ ಕ್ರೀಸಿನಲ್ಲಿ ಉಳಿದರೂ ಬ್ಯಾಟಿಂಗ್‌ ಜೋಶ್‌ ತೋರಲಿಲ್ಲ. 51 ಎಸೆತಗಳಿಂದ 28 ರನ್‌ ಮಾಡಿ ಜಡೇಜಾಗೆ ಬೌಲ್ಡ್ ಆದರು. ಹೊಡೆದದ್ದು ಎರಡೇ ಬೌಂಡರಿ. ಆದರೆ ವಿಲಿಯಮ್ಸನ್‌ ಜತೆಗೂಡಿ ತಂಡದ ಕುಸಿತವನ್ನು ತಡೆಯುವಲ್ಲಿ ನಿಕೋಲ್ಸ್ ವಹಿಸಿದ ಪಾತ್ರ ಮಹತ್ವದ್ದಾಗಿತ್ತು.

ಮೊದಲ 10 ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್‌ ಗಳಿಸಿದ್ದು ಒಂದು ವಿಕೆಟಿಗೆ 27 ರನ್‌ ಮಾತ್ರ. ಇದು ಈ ವಿಶ್ವಕಪ್‌ ಕೂಟದ ಪವರ್‌ ಪ್ಲೇ ಅವಧಿಯಲ್ಲಿ ದಾಖಲಾದ ಕನಿಷ್ಠ ಗಳಿಕೆ. ಭಾರತದ ಸ್ವಿಂಗ್‌ ಬೌಲಿಂಗ್‌ ಈ ಹಂತದಲ್ಲಿ ಅತ್ಯಂತ ಹರಿತವಾಗಿತ್ತು. 40 ಓವರ್‌ನಲ್ಲಿ ನ್ಯೂಜಿಲ್ಯಾಂಡಿಗೆ ಹೊಡೆಯಲು ಸಾಧ್ಯವಾದದ್ದು 10 ಬೌಂಡರಿ ಮಾತ್ರ.

ವಿಲಿಯಮ್ಸನ್‌-ಟೇಲರ್‌ ನೆರವು

ಎಂದಿನಂತೆ ಕೇನ್‌ ವಿಲಿಯಮ್ಸನ್‌-ರಾಸ್‌ ಟೇಲರ್‌ ಒಟ್ಟುಗೂಡಿದ ಬಳಿಕ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಜೀವ ಪಡೆಯತೊಡಗಿತು. ಇಬ್ಬರೂ ತೀವ್ರ ಎಚ್ಚರಿಕೆಯಿಂದ ಭಾರತದ ದಾಳಿಯನ್ನು ನಿಭಾಯಿಸತೊಡಗಿದರು. ಅಷ್ಟೇ ಜವಾಬ್ದಾರಿಯಿಂದ ಬ್ಯಾಟ್ ಬೀಸತೊಡಗಿದರು. ನಿಕೋಲ್ಸ್ ಜತೆ 2ನೇ ವಿಕೆಟಿಗೆ 68 ರನ್‌ ಒಟ್ಟುಗೂಡಿಸಿದ ವಿಲಿಯಮ್ಸನ್‌, ಬಳಿಕ ಟೇಲರ್‌ ನೆರವಿನಿಂದ 3ನೇ ವಿಕೆಟಿಗೆ 65 ರನ್‌ ಪೇರಿಸಿದರು. ಆದರೂ ಇದರಲ್ಲಿ ವಿಶ್ವಕಪ್‌ ನಾಕೌಟ್ ಜೋಶ್‌ ಕಂಡುಬರಲಿಲ್ಲ.

ಕೆಲವು ಆಕರ್ಷಕ ಸ್ವೀಪ್‌ ಶಾಟ್‌ಗಳ ಮೂಲಕ ಗಮನ ಸೆಳೆದ ವಿಲಿಯಮ್ಸನ್‌ 79 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ಒಟ್ಟು 95 ಎಸೆತ ಎದುರಿಸಿ 67ಕ್ಕೆ ಏರಿದರು. ಆದರೆ ಚಹಲ್ ಎಸೆತವನ್ನು ಅಂದಾಜಿಸಲಾಗದೆ ಜಡೇಜಾಗೆ ಕ್ಯಾಚ್ ನೀಡಿ ನಿರಾಸೆಯಿಂದ ವಾಪಸಾಗ ಬೇಕಾಯಿತು. ಇಲ್ಲಿಂದ ಮುಂದೆ ನ್ಯೂಜಿಲ್ಯಾಂಡ್‌ ಸರದಿಯನ್ನು ಆಧರಿಸುವ ಹೊಣೆ ಹೊತ್ತವರು ರಾಸ್‌ ಟೇಲರ್‌. ಅವರ ಅಜೇಯ 67 ರನ್‌ 85 ಎಸೆತಗಳಿಂದ ಬಂದಿದೆ. ಇದರಲ್ಲಿ 3 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್‌ ಒಳಗೊಂಡಿದೆ.

ಈ ನಡುವೆ ನೀಶಮ್‌ ಮತ್ತು ಗ್ರ್ಯಾಂಡ್‌ಹೋಮ್‌ ವಿಕೆಟ್‌ಗಳನ್ನು ಕಿವೀಸ್‌ ಕಳೆದು ಕೊಂಡಿತು. ಭಾರತದ ಪರ ದಾಳಿಗಿಳಿದ ಎಲ್ಲ ಬೌಲರ್‌ಗಳೂ ಒಂದೊಂದು ವಿಕೆಟ್ ಕೆಡವಿದ್ದಾರೆ.

ಭಾರತ-ನ್ಯೂಜಿಲ್ಯಾಂಡ್‌ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ತಾಣ ವಾದ ಓಲ್ಡ್ ಟ್ರಾಫ‌ರ್ಡ್‌ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶವನ್ನು ವಿಮಾನ ಹಾರಾಟ ನಿರ್ಬಂಧ ವಲಯವೆಂದು ಘೋಷಿಸಲಾಗಿತ್ತು. ಹೇಡಿಂಗ್ಲೆಯಲ್ಲಿ ನಡೆದ ಭಾರತ-ಶ್ರೀಲಂಕಾ ಲೀಗ್‌ ಪಂದ್ಯದ ವೇಳೆ ಖಾಸಗಿ ವಿಮಾನವೊಂದು ಭಾರತ ವಿರೋಧಿ ಬ್ಯಾನರ್‌ ಪ್ರದರ್ಶಿಸಿದ ಹಿನ್ನಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಭದ್ರತಾ ವೈಫ‌ಲ್ಯ ಮತ್ತು ತಮ್ಮ ಆಟಗಾರರ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿ ಬಿಸಿಸಿಐ ಅಧಿಕಾರಿಗಳು ಇಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳ ಸಲಹೆ ಪಡೆದ ಬಳಿಕ ಹಾರಾಟ ನಿರ್ಬಂಧ ವಲಯವೆಂದು ಘೋಷಿಸಲು ಇಸಿಬಿ ನಿರ್ಧರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next