ಟೋಕಿಯೊ: ಒಲಿಂಪಿಕ್ ಹಾಕಿಯಲ್ಲಿ ಇಂದು ಭಾರತದ ನಾಲ್ಕು ದಶಕಗಳ ಬರ ನೀಗಿದೆ. ಇಂದು ನಡೆದ ಪಂದ್ಯದಲ್ಲಿ ಜರ್ಮನಿ ತಂಡವನ್ನು ಸೋಲಿಸಿದ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡ 5-4 ಗೋಲುಗಳ ಅಂತರದಿಂದ ಜಯಿಸಿತು. ಇದರೊಂದಿಗೆ 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತು.
ಮೊದಲ ಕ್ವಾರ್ಟರ್ ನಲ್ಲಿಯೇ ಗೋಲು ಗಳಿಸಿದ ಜರ್ಮನಿ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಕ್ವಾರ್ಟರ್ ನ 13ನೇ ನಿಮಿಷದಲ್ಲಿ ಸಿಮ್ರನ್ ಜೀತ್ ಭಾರತದ ಮೊದಲ ಗೋಲು ಗಳಿಸಿದರು. ನಂತರ ಜರ್ಮನಿ ಸತತ ಎರಡು ಗೋಲು ಗಳಿಸಿ 3-1 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ಮತ್ತೆ ಹಾರ್ದಿಕ್ ಮತ್ತು ಸಿಮ್ರನ್ ಜೀತ್ ತಲಾ ಒಂದು ಗೋಲು ಗಳಿಸಿದರು. ಎರಡನೇ ಕ್ವಾರ್ಟರ್ ಅಂತ್ಯಕ್ಕೆ ಭಾರತ ಮತ್ತು ಜರ್ಮನಿ ತಂಡಗಳು 3-3 ಗೋಲು ಗಳಿಸಿದ್ದವು.
ಇದನ್ನೂ ಓದಿ:ಭಾರತದ ವೇಗಕ್ಕೆ ಕುಸಿದ ಇಂಗ್ಲೆಂಡ್
ಮೂರನೇ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಅವಕಾಶ ಬಳಸಿಕೊಂಡ ರೂಪಿಂದರ್ ಗೋಲು ಗಳಿಸಿ ಮುನ್ನಡೆ ಒದಗಿಸಿದರು. ಮತ್ತೊಂದು ಗೋಲು ಗಳಿಸಿದ ಸಿಮ್ರನ್ ಜೀತ್ ಭಾರತದ ಗೋಲು ಸಂಖ್ಯೆಯನ್ನು 5ಕ್ಕೆ ಏರಿಸಿದರು. ಅಂತಿಮ ಕ್ವಾರ್ಟರ್ ನಲ್ಲಿ ಜರ್ಮನಿಯ ವಿಂಡ್ ಫೆಡರ್ ಗೋಲು ಗಳಿಸಿದರು. ಅಂತಿಮ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದರೂ ಜರ್ಮನಿ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಭಾರತ ತಂಡ 5-4 ಗೋಲು ಅಂತರದಿಂದ ಜಯಿಸಿತು.