Advertisement

ಬ್ಯಾಟಿಂಗ್‌ ವೈಫ‌ಲ್ಯ; ಭಾರತ ಪರಾಭವ

09:29 AM May 27, 2019 | Team Udayavani |

ಲಂಡನ್‌: ಭಾರೀ ನಿರೀಕ್ಷೆಯೊಂದಿಗೆ ಇಂಗ್ಲೆಂಡಿಗೆ ಸಾಗಿದ ಭಾರತ ತಂಡ ನ್ಯೂಜಿಲ್ಯಾಂಡ್‌ ಎದುರಿನ ಶನಿವಾರದ ಓವಲ್‌ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿ 6 ವಿಕೆಟ್‌ಗಳ ಸೋಲನುಭವಿಸಿದೆ.

Advertisement

ವೇಗಿ ಟ್ರೆಂಟ್‌ ಬೌಲ್ಟ್ ಮತ್ತು ಮಧ್ಯಮ ವೇಗಿ ಜಿಮ್ಮಿ ನೀಶಮ್‌ ದಾಳಿಗೆ ತತ್ತರಿಸಿದ ಕೊಹ್ಲಿ ಪಡೆ 39.2 ಓವರ್‌ಗಳಲ್ಲಿ 179 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ನ್ಯೂಜಿಲ್ಯಾಂಡ್‌ 37.1 ಓವರ್‌ಗಳಲ್ಲಿ 4 ವಿಕೆಟಿಗೆ 180 ರನ್‌ ಬಾರಿಸಿತು. ಭಾರತ ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲಿದೆ.

ಚೇಸಿಂಗ್‌ ವೇಳೆ ಕಿವೀಸ್‌ ಆರಂಭಿಕರಾದ ಗಪ್ಟಿಲ್‌ (22) ಮತ್ತು ಮುನ್ರೊ (4) ಅವರನ್ನು ಬೇಗನೇ ಕಳೆದುಕೊಂಡರೂ ನಾಯಕ ವಿಲಿಯಮ್ಸನ್‌ (67) ಮತ್ತು ರಾಸ್‌ ಟೇಲರ್‌ (71) ದಿಟ್ಟ ಬ್ಯಾಟಿಂಗ್‌ ನಡೆಸಿದರು.

ಭಾರತದ ಸರದಿಯಲ್ಲಿ ರವೀಂದ್ರ ಜಡೇಜ ಅವರ ಅರ್ಧ ಶತಕದ ಹೊರತಾಗಿ ಬೇರೆ ದೊಡ್ಡ ಸ್ಕೋರ್‌ ದಾಖಲಾಗಲಿಲ್ಲ. 8ನೇ ಕ್ರಮಾಂಕದಲ್ಲಿ ಆಡಲಿಳಿದ ಜಡೇಜ ಭರ್ತಿ 50 ಎಸೆತ ಎದುರಿಸಿ 54 ರನ್‌ ಹೊಡೆದರು. ಇದರಲ್ಲಿ 6 ಬೌಂಡರಿ ಮತ್ತು ಇನ್ನಿಂಗ್ಸಿನ ಎರಡೂ ಸಿಕ್ಸರ್‌ ಸೇರಿತ್ತು.

ಕಾಡಿದ ಟ್ರೆಂಟ್‌ ಬೌಲ್ಟ್
ಟ್ರೆಂಟ್‌ ಬೌಲ್ಟ್ ಮೊದಲ ಓವರಿನಿಂದಲೇ ಭಾರತದ ಆಟಗಾರರ ಪಾಲಿಗೆ ಸಿಂಹಸ್ವಪ್ನರಾದರು. ತಮ್ಮ ಮೊದಲ ಓವರಿನಲ್ಲಿ ರೋಹಿತ್‌ ಶರ್ಮ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರೆ, ಮುಂದಿನ ಓವರಿನಲ್ಲೇ ಧವನ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಇಬ್ಬರ ಗಳಿಕೆಯೂ 2 ರನ್‌.
ನಾಯಕ ಕೊಹ್ಲಿ 24 ಎಸೆತಗಳಿಂದ 18 ರನ್‌ ಮಾಡಿ (3 ಬೌಂಡರಿ) ಗ್ರ್ಯಾಂಡ್‌ಹೋಮ್‌ಗೆ ಬೌಲ್ಡ್‌ ಆದರು. 4ನೇ ಕ್ರಮಾಂಕದಲ್ಲಿ ಬಂದ ರಾಹುಲ್‌ ಕೂಡ ಕ್ಲಿಕ್‌ ಆಗಲಿಲ್ಲ. ಕೇವಲ 6 ರನ್‌ ಮಾಡಿ ಬೌಲ್ಟ್ ಎಸೆತಕ್ಕೆ ಸ್ಟಂಪ್‌ ಎಗರಿಸಿಕೊಂಡರು.

Advertisement

115ಕ್ಕೆ 8 ವಿಕೆಟ್‌ ಪತನ
ಭಡ್ತಿ ಪಡೆದ ಪಾಂಡ್ಯ ಉತ್ತಮ ಲಯದಲ್ಲಿದ್ದಂತೆ ಕಂಡು ಬಂದರು. 6 ಬೌಂಡರಿ ನೆರವಿನಿಂದ 30 ರನ್‌ ಮಾಡಿದರು. ಧೋನಿ ಗಳಿಕೆ 42 ಎಸೆತಗಳಿಂದ 17 ರನ್‌. ಕಾರ್ತಿಕ್‌ ಕಾಣಿಕೆ ನಾಲ್ಕೇ ರನ್‌. 29ನೇ ಓವರಿನಲ್ಲಿ ಭಾರತ 8ಕ್ಕೆ 115 ಮಾಡಿ ಕುಂಟುತ್ತಿತ್ತು.  ಇಂಥ ಸಂದಿಗ್ಧ ಹಂತದಲ್ಲಿ ನೆರವಿಗೆ ಬಂದವರು ಜಡೇಜ. ಅವರಿಗೆ ಕುಲದೀಪ್‌ (19) ಉತ್ತಮ ಬೆಂಬಲವಿತ್ತರು. 9ನೇ ವಿಕೆಟಿಗೆ 62 ರನ್‌ ಒಟ್ಟುಗೂಡಿತು.

ಸಂಕ್ಷಿಪ್ತ ಸ್ಕೋರ್‌
ಭಾರತ-39.2 ಓವರ್‌ಗಳಲ್ಲಿ ಆಲೌಟ್‌ 179 (ಜಡೇಜ 54, ಪಾಂಡ್ಯ 30, ಕುಲದೀಪ್‌ 19, ಕೊಹ್ಲಿ 18, ಧೋನಿ 17, ಬೌಲ್ಟ್ 33ಕ್ಕೆ 4, ನೀಶಮ್‌ 26ಕ್ಕೆ 3). ನ್ಯೂಜಿಲ್ಯಾಂಡ್‌-37.1 ಓವರ್‌ಗಳಲ್ಲಿ 4 ವಿಕೆಟಿಗೆ 180 (ಟೇಲರ್‌ 71, ವಿಲಿಯಮ್ಸನ್‌ 67, ಬುಮ್ರಾ 2ಕ್ಕೆ 1, ಪಾಂಡ್ಯ 26ಕ್ಕೆ 1, ಜಡೇಜ 27ಕ್ಕೆ 1, ಚಾಹಲ್‌ 37ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next